ಬೆಳುವಾಯಿ: ವಿಶ್ವಕರ್ಮ ಸಮಾಜ ಸೇವಾ ಸಮಿತಿಯಿಂದ ಪುಸ್ತಕ ವಿತರಣೆ

ಮೂಡುಬಿದಿರೆ, ಜೂ.9: ಬೆಳುವಾಯಿ ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 66 ವಿದ್ಯಾರ್ಥಿಗಳಿಗೆ ಸುಮಾರು 20 ಸಾವಿರ ರೂ. ವೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಬೆಳುವಾಯಿ ನವರತ್ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಜಯಕರ ಆಚಾರ್ಯ ಪುಸ್ತಕ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಸಮಾಜದಿಂದ ಪಡೆದ ಋಣವನ್ನು ತಮ್ಮ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರಿದ ಬಳಿಕ ತೀರಿಸುವ ಮೂಲಕ ಇನ್ನೊಬ್ಬರ ಜೀವನ ಬೆಳಗಿಸಬೇಕು ಎಂದರು.
ಇದೇ ಸಂದರ್ದಲ್ಲಿ ದೂರವಾಣಿ ಇಲಾಖೆಯಲ್ಲಿ ಆಪರೇಟರ್ ಆಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಯ ಆಚಾರ್ಯ ಬೆಳುವಾಯಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಎಸೆಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರಮ್ಯಾ ಆಚಾರ್ಯ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಹರ್ಷಿತಾ ಆಚಾರ್ಯರನ್ನು ಗೌರವಿಸಲಾಯಿತು.
ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶಿವರಾಮ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಮಾಲತಿ ರಾಮಚಂದ್ರ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಬೆಳುವಾಯಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೂಡುವಳಿಕೆ ಮೊಕ್ತೇಸರ ಭೋಜ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾಕರ ಆಚಾರ್ಯ ಸ್ವಾಗತಿಸಿದರು. ಶುಭಕರ ಆಚಾರ್ಯ ವಂದಿಸಿದರು. ಅರವಿಂದ ವೈ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.







