ದಿಲ್ಲಿಯಲ್ಲಿ ಐಎಎಫ್ ಅಧಿಕಾರಿಯ ಬಿಗಿಭದ್ರತೆಯ ಮೊಬೈಲ್-ಲ್ಯಾಪ್ಟಾಪ್ ಕಳವು
![ದಿಲ್ಲಿಯಲ್ಲಿ ಐಎಎಫ್ ಅಧಿಕಾರಿಯ ಬಿಗಿಭದ್ರತೆಯ ಮೊಬೈಲ್-ಲ್ಯಾಪ್ಟಾಪ್ ಕಳವು ದಿಲ್ಲಿಯಲ್ಲಿ ಐಎಎಫ್ ಅಧಿಕಾರಿಯ ಬಿಗಿಭದ್ರತೆಯ ಮೊಬೈಲ್-ಲ್ಯಾಪ್ಟಾಪ್ ಕಳವು](https://www.varthabharati.in/sites/default/files/images/articles/2016/06/9/IAF_IMAGE.jpg)
ಹೊಸದಿಲ್ಲಿ, ಜೂ.9: ಭಾರತೀಯ ವಾಯುದಳದ ಅಧಿಕಾರಿಯೊಬ್ಬರ ದಿಲ್ಲಿಯ ಬಿಗುಭದ್ರತೆಯ ಅಧಿಕೃತ ನಿವಾಸದಿಂದ ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ ಕಳವಾಗಿದೆ.
ವಿಂಗ್ ಕಮಾಂಡರ್ ಹುದ್ದೆಯ ಈ ಅಧಿಕಾರಿ ಐಎಎಫ್ ಮುಖ್ಯಾಲಯದಲ್ಲಿ ನಿಯೋಜನೆಗೊಂಡಿದ್ದು, ವಾಯುಪಡೆಯ ಸೆಲ್ಯುಲರ್ ಮೊಬೈಲ್(ಎಎಫ್ಸಿಇಎಲ್) ಉಪಯೋಗಿಸುತ್ತಿದ್ದರು. ಅದು ಐಎಎಫ್ನ ಭಾರೀ ಭದ್ರತೆಯ 3ಜಿ ಸೆಲ್ಯುಲರ್ ಜಾಲದ ಸಂಪರ್ಕ ಪಡೆದಿತ್ತು.
ಫೋನ್ ಹಾಗೂ ಲ್ಯಾಪ್ಟಾಪ್ಗಳನ್ನು ಸೂಕ್ಷ್ಮ ಮಾಹಿತಿ ಸಂಗ್ರಹಣೆಗೆ ಉಪಯೋಗಿಸಿರುವ ಸಾಧ್ಯತೆಯಿರುವುದರಿಂದ, ದಿಲ್ಲಿ ಪೊಲೀಸರು ಎಲ್ಲ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೊಂದು ಕಳವು ಪ್ರಕರಣವೇ ಅಥವಾ ಅದಕ್ಕಿಂತ ಹೆಚ್ಚಿನದೇನಾದರೂ ಇದೆಯೇ ಎಂಬ ಕುರಿತು ಅವರು ಪರಿಶೋಧನೆ ನಡೆಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಂಗ್ ಕಮಾಂಡರ್ ತನ್ನ ದೂರಿನಲ್ಲಿ, ತನ್ನ ಕುಟುಂಬವು ಮನೆಯಲ್ಲಿರಲಿಲ್ಲ. ಬೇಸಗೆಯ ರಜೆಗಾಗಿ ಅವರೆಲ್ಲ ಹಿರಿಯರ ಮನೆಗೆ ಹೋಗಿದ್ದ ವೇಳೆ ಈ ಕಳವು ನಡೆದಿದೆಯೆಂದು ಹೇಳಿದ್ದಾರೆ.
ಈ ಸಂಬಂಧ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹ್ಯಾಕಿಂಗ್ ಹಾಗೂ ಮಾಹಿತಿ ಕಳವನ್ನು ತಡೆಯುವುದಕ್ಕಾಗಿ 2013ರ ಅ.25ರಂದು ಐಎಎಫ್ ತನ್ನ ಸಿಬ್ಬಂದಿಗಾಗಿ ಎಎಫ್ಸಿಇಎಲ್ ವ್ಯವಸ್ಥೆಯನ್ನು ಆರಂಭಿಸಿತ್ತು.