ರಮಝಾನ್‌ನಲ್ಲಿ ಡಯಾಬಿಟಿಸ್ ನಿರ್ವಹಣೆ ಹೇಗೆ?
.jpg)
ರಮಝಾನ್ ವೇಳೆ ಉಪವಾಸ ಕೈಗೊಳ್ಳುವ ಮಧುಮೇಹ ರೋಗಿಗಳಿಗೆ ಸಂಕೀರ್ಣ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯರು ಉಪವಾಸ ಮಾಡಬಹುದು ಎಂದು ಸಲಹೆ ಮಾಡಿದರಷ್ಟೇ ಉಪವಾಸ ಕೈಗೊಳ್ಳಬೇಕು ಎನ್ನುವುದು ತಜ್ಞರ ಸಲಹೆ.
ಒಂದು ತಿಂಗಳಿಡೀ ಹಗಲಿನ ವೇಳೆಯಲ್ಲಿ ನಿರಾಹಾರಿಗಳಾಗುವುದು ಹಾಗೂ ಪ್ರತಿದಿನ ಸಂಜೆ ಇಫ್ತಾರ್ ಕೂಟಗಳಲ್ಲಿ ಭೋಜನ ಮಾಡುವುದು ಹಾಗೂ ಮುಂಜಾನೆವರೆಗೂ ನಿಯಮಿತವಾಗಿ ಆಹಾರವನ್ನು ತೆಗೆದುಕೊಳ್ಳಲಾಗುತ್ತದೆ.
ಆಹಾರ ತೆಗೆದುಕೊಳ್ಳುವಲ್ಲಿ 12 ರಿಂದ 15 ಗಂಟೆಗಳ ಅಂತರದಲ್ಲಿ ಸಹಜವಾಗಿಯೇ ದೇಹದ ಚಯಾಪಚಯ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. ಇದು ಮಧುಮೇಹ ರೋಗಿಗಳಲ್ಲಿ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಆದ್ದರಿಂದ ಉಪವಾಸ ಕೈಗೊಳ್ಳುವ ಮೊದಲು ವೈದ್ಯರ ಸಲಹೆ ಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಸಾಕೇತ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಧುಮೇಹ ತಜ್ಞ ವಿಕಾಸ್ ಅಹ್ಲುವಾಲಿಯಾ ಹೇಳುತ್ತಾರೆ.
ಉಪವಾಸ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವ ಅಥವಾ ದೇಹದಲ್ಲಿ ಸಕ್ಕರೆ ಅಂಶ ವ್ಯತ್ಯಯವಾಗುವ ಅಪಾಯ ಇರುತ್ತದೆ. ದೀರ್ಘ ಉಪವಾಸದ ಬಳಿಕ ನಿಯತವಾಗಿ ರಾತ್ರಿ ಆಹಾರ ತೆಗೆದುಕೊಳ್ಳುವುದರಿಂದ ಸಕ್ಕರೆ ಅಂಶ ವ್ಯತ್ಯಯವಾಗುತ್ತದೆ. ಸಕ್ಕರೆ ಅಂಶ ರಕ್ತದಲ್ಲಿ ದಿಢೀರನೆ ಕಡಿಮೆಯಾದಾಗ ಹೈಪೋಗ್ಲೈಸೇಮಿಯಾ ರೋಗಕ್ಕೂ ತುತ್ತಾಗುವ ಸಾಧ್ಯತೆ ಇರುತ್ತದೆ. ಇದರಿಂದ ರೋಗಿ ಪ್ರಜ್ಞೆಯನ್ನೂ ಕಳೆದುಕೊಳ್ಳುವ ಅಪಾಯವಿದೆ.
ಈ ಹಿನ್ನೆಲೆಯಲ್ಲಿ ಅಧಿಕ ಕಾರ್ಬೊಹೈಡ್ರೇಟ್‌ಗಳಿರುವ ಸಕ್ಕರೆ, ಕಲ್ಲುಸಕ್ಕರೆ, ಜೇನು, ಘನೀಕೃತ ಹಾಲಿನಂಥ ಬಳಕೆಯನ್ನು ಕಡಿಮೆ ಮಾಡಿ, ಸಾಧ್ಯವಾದಷ್ಟೂ ಕೆಂಪಕ್ಕಿ, ಇಡೀ ಕಾಳಿನ ಬ್ರೆಡ್, ತರಕಾರಿಗಳನ್ನು ಬಳಸಬಹುದು. ಬೆಳ್ತಿಗೆ ಅಕ್ಕಿ ಅಥವಾ ಆಲೂಗಡ್ಡೆ ಬಳಕೆ ಬೇಡ. ಉಪವಾಸ ಬಿಡುವ ವೇಳೆಯಲ್ಲಿ ನೈಸರ್ಗಿಕ ಸಕ್ಕರೆ ಅಂಶವಿರುವ ಹಣ್ಣುಗಳ ರಸಗಳನ್ನು ಸೇವಿಸಬಹುದು.
ಮುಂಜಾನೆ ಆಹಾರದಲ್ಲಿ ಸಿಹಿ ತಿನಿಸು, ಕರಿದ ಪದಾರ್ಥಗಳು ಹಾಗೂ ಅಧಿಕ ಲವಣ ಹಾಗೂ ಸಕ್ಕರೆ ಅಂಶಗಳಿರುವ ಆಹಾರ ಬೇಡ. ರಾತ್ರಿ ಊಟವಾದ ತಕ್ಷಣ ನಿದ್ದೆ ಬೇಡ. ಕನಿಷ್ಠ ಊಟ ಹಾಗೂ ನಿದ್ದೆ ನಡುವೆ 2 ಗಂಟೆ ಅಂತರವಿರಲಿ.







