ಝಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ: ಮನೀಷ್ ಪಾಂಡೆ
ಹರಾರೆ, ಜೂ.9: ಆಫ್ರಿಕ ದೇಶ ಝಿಂಬಾಬ್ವೆ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದ ಭಾರತದ ಯುವ ದಾಂಡಿಗ ಮನೀಷ್ ಪಾಂಡೆ ಶನಿವಾರದಿಂದ ಆರಂಭವಾಗಲಿರುವ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ತನ್ನ ಛಾಪು ಮೂಡಿಸಲು ಬಯಸಿದ್ದಾರೆ.
ಕರ್ನಾಟಕದ ಪಾಂಡೆ ಹರಾರೆ ಸ್ಪೋರ್ಟ್ ಕ್ಲಬ್‌ನಲ್ಲಿ ಶನಿವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಇದೇ ಮೈದಾನದಲ್ಲಿ ಪಾಂಡೆ ಚೊಚ್ಚಲ ಪಂದ್ಯ ಆಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ 71 ರನ್ ಗಳಿಸಿದ್ದ ಪಾಂಡೆ ಆಸ್ಟ್ರೇಲಿಯದಲ್ಲಿ 3 ಏಕದಿನ ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದರು. ಸಿಡ್ನಿಯಲ್ಲಿ 104 ರನ್ ಗಳಿಸಿದ್ದ ಪಾಂಡೆ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಏಕೈಕ ಗೆಲುವು ಪಡೆಯಲು ಮಹತ್ವದ ಕಾಣಿಕೆ ನೀಡಿದ್ದರು.
‘‘ಇದು ನನಗೆ ಮತ್ತೊಮ್ಮೆ ಹೊಸ ಆರಂಭ. ನಾವು ಕಳೆದ ವರ್ಷ ಇದೇ ಸಮಯದಲ್ಲಿ ಇಲ್ಲಿಗೆ ಬಂದಿದ್ದೆವು. ಝಿಂಬಾಬ್ವೆಯಲ್ಲಿ ನಾನು ಚೊಚ್ಚಲ ಪಂದ್ಯ ಆಡಿದ್ದೆ. ಮತ್ತೊಮ್ಮೆ ಇಲ್ಲಿಗೆ ಬಂದು ಹಳೆ ನೆನಪನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಈ ಬಾರಿ ಭಾರತದ ಪರ ಮತ್ತಷ್ಟು ರನ್ ಗಳಿಸುವ ಉದ್ದೇಶವಿದೆ’’ಎಂದು ಪಾಂಡೆ ಹೇಳಿದ್ದಾರೆ.
ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಮ್ಯಾಚ್-ವಿನ್ನಿಂಗ್ ಶತಕ ಬಾರಿಸಿದ ಹೊರತಾಗಿಯೂ ಪಾಂಡೆಗೆ ಈ ವರೆಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.







