ಶುಕ್ರವಾರ ಮುಹಮ್ಮದ್ ಅಲಿ ಅಂತ್ಯ ಸಂಸ್ಕಾರ: ಟಿಕೆಟ್‌ಗಳು ಸೋಲ್ಡ್‌ಔಟ್

ಲೂಯಿಸ್‌ವಿಲ್, ಜೂ.9: ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಅವರ ಅಂತ್ಯ ಸಂಸ್ಕಾರ ಶುಕ್ರವಾರ ಲೂಯಿಸ್‌ವಿಲ್ ನಗರದಲ್ಲಿ ನಡೆಯಲಿದ್ದು, ಇದಕ್ಕಾಗಿ 15,000 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಅತ್ಯಂತ ದೊಡ್ಡದಾದ ಸ್ಪೋರ್ಟ್ಸ್ ಅರೆನಾ ಕೆಎಫ್‌ಸಿ ಯಮ್ ಸೆಂಟರ್‌ನಲ್ಲಿ ಸೀಟು ಕಾಯ್ದಿರಿಸಲು ಮುಂಜಾನೆಯಿಂದಲೇ ಜನರು ಕ್ಯೂನಲ್ಲಿ ಕಾದು ನಿಂತಿದ್ದರು. ಬಾಕ್ಸಿಂಗ್ ಲೆಜೆಂಡ್ ಅಲಿ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಹಾಸ್ಯನಟ ಬಿಲ್ಲಿ ಕ್ರಿಸ್ಟಾಲ್ ಭಾಗವಹಿಸಲಿದ್ದಾರೆ.
ಮುಹಮ್ಮದ್ ಅಲಿ ಅತ್ಯದ್ಭುತ ಬಾಕ್ಸಿಂಗ್ ವೃತ್ತಿಜೀವನ ಹಾಗೂ ನಾಗರಿಕ ಹಕ್ಕು ಸಕ್ರಿಯತೆ ಮೂಲಕ 20ನೆ ಶತಮಾನದಲ್ಲಿ ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದರು. ಸುದೀರ್ಘ ಕಾಲದಿಂದ ಬಾಧಿಸುತ್ತಿದ್ದ ಪಾರ್ಕಿನ್ಸನ್ ಕಾಯಿಲೆಯಿಂದಾಗಿ ಕಳೆದ ವಾರ 74ನೆ ಹರೆಯದಲ್ಲಿ ನಿಧನರಾಗಿದ್ದರು. 10 ಟಿಕೆಟ್ ಬೂತ್‌ಗಳಲ್ಲಿ ಪ್ರತಿ ವ್ಯಕ್ತಿಗೆ ನಾಲ್ಕು ಟಿಕೆಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದ್ದು, ಕೇವಲ ಒಂದು ಗಂಟೆಯೊಳಗೆ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ.
ಮುಹಮ್ಮದ್ ಅಲಿ ಸ್ಮಾರಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ನಾವು ಶ್ರೇಷ್ಠ ಬಾಕ್ಸರ್‌ನನ್ನು ನೆನಪಿಸಿಕೊಳ್ಳಲು ಬಯಸುತ್ತೇವೆ ಎಂದು ಕೆಎಫ್‌ಸಿ ಯಮ್ ಸೆಂಟರ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಮುಹಮ್ಮದ್ ಅಲಿ ಕೇವಲ ಅಥ್ಲೀಟ್ ಮಾತ್ರವಲ್ಲ ನಿಜವಾದ ಮಾನವತಾವಾದಿ ಎಂದು ಜೆಸ್ಸಿಕಾ ಮೂರ್ ಹೇಳಿದ್ದಾರೆ.







