ಮಹಿಳೆ ಉದ್ದಿಮೆದಾರರ ನೆರವಿಗೆ ‘ಮಹಿಳಾ ಪಾರ್ಕ್’: ಸಿಎಂ
‘ಎಮರ್ಜ್’ ಸಮಾವೇಶ

ಬೆಂಗಳೂರು, ಜೂ. 9: ಮಹಿಳಾ ಉದ್ದಿಮೆದಾರರಿಗೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರಕಾರ ಸಿದ್ಧವಿದ್ದು, ರಾಜ್ಯದ ಹುಬ್ಬಳ್ಳಿ-ಧಾರವಾಡ ಮತ್ತು ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ‘ಮಹಿಳಾ ಪಾರ್ಕ್’ ನಿರ್ಮಾಣಕ್ಕೆ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಮಹಿಳಾ ಉದ್ದಿಮೆದಾರರ ಸಂಘ ಏರ್ಪಡಿಸಿದ್ದ, ‘ಎಮರ್ಜ್’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾರೋಹಳ್ಳಿಯ ನೂರು ಎಕರೆ ಪ್ರದೇಶವನ್ನು ಮಹಿಳಾ ಪಾರ್ಕ್‌ಗಾಗಿ ಮೀಸಲಿಡಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಆರಂಭಿಸಲಿರುವ ಕೈಗಾರಿಕಾ ಪಾರ್ಕ್‌ಗಳು ಹಾಗೂ ಕೈಗಾರಿಕಾ ವಸಾಹತುಗಳಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಶೇ.5ರಷ್ಟು ಮೀಸಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಮಹಿಳಾ ಉದ್ದಿಮೆದಾರರಿಗೆ ಅಗತ್ಯ ಸಹಕಾರ, ಬೆಂಬಲ ನೀಡುವ ಸಲುವಾಗಿ ಹಲವು ನೀತಿಗಳನ್ನು ಜಾರಿಗೊಳಿಸಲಾಗಿದೆ ಎಂದ ಅವರು, 2014-19ರ ಕೈಗಾರಿಕಾ ನೀತಿಯಲ್ಲೂ ಕೂಡ ಹಲವು ವಿಶೇಷ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಮುಂದೆ ಬರುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಮಾನ ಅವಕಾಶಗಳು ಸಿಗುತ್ತಿವೆ. ಮಹಿಳೆಯರೂ ಕೂಡ ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.
ಮಹಿಳಾ ಉದ್ದಿಮೆದಾರರಿಗೆ ದೇಶದಲ್ಲೇ ವಿಶೇಷ ಸೌಲಭ್ಯಗಳನ್ನು ಕರ್ನಾಟಕ ರಾಜ್ಯ ಕಲ್ಪಿಸಿದೆ. ಹೀಗಾಗಿ ದೇಶದಲ್ಲಿ ರಾಜ್ಯ ಮೂರನೆ ಸ್ಥಾನ ಪಡೆದಿದೆ. ಇಲ್ಲಿ ಒಂದು ಲಕ್ಷ ಮೂರು ಸಾವಿರ ಮಂದಿ ಮಹಿಳಾ ಉದ್ದಿಮೆದಾರರಿದ್ದು, ಮಹಿಳಾ ಉದ್ದಿಮೆದಾರರ ಸಬಲೀಕರಣ ಮತ್ತು ಅವರ ಅಭಿವೃದ್ಧಿಗಾಗಿ ಸರಕಾರ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರಪ್ಪನಾಯ್ಡು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಎಮರ್ಜ್ ಸಂಘಟನೆಯ ಆರ್.ರಾಜಲಕ್ಷ್ಮೀ, ರಾಷ್ಟ್ರೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರವೀಂದ್ರನಾಥ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.





