ಸೆ.2ರ ಅಖಿಲ ಭಾರತ ಮಹಾ ಮುಷ್ಕರ ಯಶಸ್ವಿಗೊಳಿಸಲು ಸಿಐಟಿಯು ಕರೆ

ಮಂಗಳೂರು,ಜೂ 9:ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳು ಸೆ. 2ರಂದು ಅಖಿಲ ಭಾರತ ಮಹಾ ಮುಷ್ಕರಕ್ಕೆ ಕರೆ ನೀಡಿದ್ದು, ಅದನ್ನು ದ.ಕ. ಜಿಲ್ಲೆಯಾದ್ಯಂತ ಯಶಸ್ವಿಗೊಳಿಸಬೇಕೆಂದು ಸಿಐಟಿಯು ವಿನ 15ನೆ ದ.ಕ. ಜಿಲ್ಲಾ ಸಮ್ಮೇಳನವು ಕಾರ್ಮಿಕ ವರ್ಗಕ್ಕೆ ಕರೆ ನೀಡಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕ ಸಂಘಟನೆಗಳ ಎಲ್ಲಾ ಬೇಡಿಕೆಗಳನ್ನು ಆದ್ಯತೆಯ ನೆಲೆಯಲ್ಲಿ ಪರಿಹರಿಸಬೇಕು. ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳ ಹಿತಾಸಕ್ತಿಗಾಗಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ನ್ಯಾಯೋಚಿತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಕಾನೂನುಗಳನ್ನು ಮಾಲಿಕರ ಪರ ತಿದ್ದುಪಡಿ ಮಾಡಲಾಗುತ್ತದೆ ಇದನ್ನು ಸಿಐಟಿಯು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ.
ಕನಿಷ್ಟ ವೇತನ, ಸಂಘ ಕಟ್ಟುವ ಹಕ್ಕು, ಕೈಗಾರಿಕಾ ವಿವಾದ ಕಾಯ್ದೆ, ಪ್ರಾವಿಡೆಂಟ್ ಫಂಡ್ ಕಾಯ್ದೆ, ಗುತ್ತಿಗೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ತಿದ್ದುಪಡಿ ಮಾಡುವುದು ಮಾತ್ರವಲ್ಲದೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ನಿರಾಕರಿಸಲಾಗುತ್ತಿದೆ. ಬಹಿರಂಗವಾಗಿ ಮಾಲಕರ ಪರ ನಿಲುವನ್ನು ತೆಗೆದುಕೊಳ್ಳುತ್ತಿದೆ. ಆದ್ದರಿಂದ ಕಾರ್ಮಿಕ ವರ್ಗದ ಪರವಾಗಿರುವ ಎಲ್ಲಾ ಬೇಡಿಕೆಗಳನ್ನು ಸಿಐಟಿಯು ಬೆಂಬಲಿಸಿದ್ದು, ಈ ಮುಷ್ಕರವನ್ನು ದ.ಕ. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಯಶಸ್ವಿಗೊಳಿಸಲು ಕಾರ್ಮಿಕರ ಮಧ್ಯೆ ಸಾಮೂಹಿಕ ಪ್ರಚಾರ ನಡೆಸಬೇಕೆಂದು ಸಿಐಟಿಯು ಸಮ್ಮೇಳನ ಕರೆ ನೀಡಿದೆ.
ರಾಜ್ಯದ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು 18,000 ರೂ. ನಿಗದಿಪಡಿಸಬೇಕೆಂದು ಸಿಐಟಿಯುವಿನ ದ.ಕ. ಜಿಲ್ಲಾ ಸಮ್ಮೇಳನವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ಸರಕಾರ ಕೆಲವು ಕೆಲಸಗಳಿಗೆ ಕನಿಷ್ಠ ಕೂಲಿ ನಿಗದಿಪಡಿಸಿದೆ. ಆದರೆ ಕರ್ನಾಟಕ ಮಾಲಕರ ಸಂಘದವರು ಈ ಕನಿಷ್ಠ ಕೂಲಿ ಜಾರಿಗೊಳಿಸದಂತೆ ತಡೆಯೊಡ್ಡಿರುತ್ತಾರೆ. ರಾಜ್ಯ ಸರಕಾರ ಮಾಲಿಕರ ಪರ ವಾಲುತ್ತಿದೆ. ಈಗಾಗಲೇ ಸಿಐಟಿಯು ರಾಜ್ಯ ಸಮಿತಿಯ ನೇತೃತ್ವದಲ್ಲಿ ರಾಜ್ಯ ಮಟ್ಟದ ರ್ಯಾಲಿಯನ್ನು ಸಂಘಟಿಸಿ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಮಾಲಿಕರ ಪರ ವಾಲಬಾರದೆಂದು ಒತ್ತಾಯಿಸಿದೆ.
ಆಕುಶಲ ಕಾರ್ಮಿಕನಿಗೂ ಸೇರಿದಂತೆ 18,000 ರೂ. ಕನಿಷ್ಠ ಕೂಲಿಯನ್ನು ನಿಗದಿ ಪಡಿಸಬೇಕೆಂದು ಸಿಐಟಿಯು ಒತ್ತಾಯಿಸಿದ್ದು, ಇದರ ಭಾಗವಾಗಿ ಮುಖ್ಯಮಂತ್ರಿಗಳು ಸಿಐಟಿಯು ನಿಯೋಗಕ್ಕೆ ಮಾತುಕತೆಗೆ ದಿನಾಂಕ ಗೊತ್ತುಪಡಿಸಿ ರದ್ದುಗೊಳಿಸಿರುವುದು ತೀರಾ ಖಂಡನೀಯ. ವಿಪರೀತ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರು ಬದುಕು ನಿರ್ವಹಿಸುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ 18,000 ರೂ. ಕನಿಷ್ಠ ಕೂಲಿಯನ್ನು ನಿಗದಿಪಡಿಸಬೇಕೆಂದು ಸಿಐಟಿಯುವಿನ ದ.ಕ. ಜಿಲ್ಲಾ ಸಮ್ಮೇಳನವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ದ.ಕ. ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದು ಅವರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕಾದ ಕಾರ್ಮಿಕ ಇಲಾಖೆಗೆ ಸ್ವಂತ ಕಟ್ಟಡವಿಲ್ಲದೆ ಪರದಾಡುತ್ತಿದ್ದು ಕೂಡಲೇ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಬೇಕೆಂದು ಸಿಐಟಿಯುವಿನ ದ.ಕ. ಜಿಲ್ಲಾ ಸಮ್ಮೇಳನವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ಜಿಲ್ಲೆಯ ಲಕ್ಷಾಂತರ ಕಾರ್ಮಿಕರು ಸಂಘಟಿತ ಹಾಗೂ ಅಸಂಘಟಿತ ರಂಗಗಳಲ್ಲಿ ದುಡಿಯುತ್ತಿದ್ದಾರೆ.
ಕಾರ್ಮಿಕರ ವಾದಗಳು ಇತ್ಯರ್ಥಪಡಿಸುವ, ಕಾರ್ಮಿಕರಿಗೆ ತರಬೇತಿ ನೀಡುವ ಕಾರ್ಮಿಕ ಇಲಾಖೆಗೆ ಸ್ವಂತ ಕಟ್ಟಡವಿಲ್ಲ. ಇದ್ದ ಬಾಡಿಗೆ ಕಟ್ಟಡದಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ. ಮಾಲಿಕರ ಮತ್ತು ಕಾರ್ಮಿಕರ ವಾದ ಪರಿಹರಿಸಬೇಕಾದ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಹೋರಾಟ ನಡೆಸಲು ಸ್ಥಳಾವಕಾಶವು ಇಲ್ಲವಾಗಿದೆ. ಕಾರ್ಮಿಕ ಇಲಾಖೆಗೆ ಸುಸಜ್ಜಿತವಾಗದ ಕಾರ್ಮಿಕ ಭವನದ ಅಗತ್ಯವಿದೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಂಗಳೂರು ನಗರದಲ್ಲಿ ಕೂಡಲೇ ಕಾರ್ಮಿಕ ಭವನವನ್ನು ನಿರ್ಮಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.







