ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ: ಸಚಿವ ಯು.ಟಿ.ಖಾದರ್

ಬೆಂಗಳೂರು, ಜೂ. 9: ಮುಂಗಾರು ಮಳೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡೆಂಗ್, ಚಿಕನ್‌ಗುನ್ಯಾ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗಗಳ ತಡೆಗೆ ಇಲಾಖೆ ಸನ್ನದ್ಧವಾಗಿದೆ ಎಂದು ಅಭಯ ನೀಡಿದರು.
ಆತಂಕ ಬೇಡ: ಚಳಿ, ಜ್ವರ, ಮೈ-ಕೈ ನೋವು, ಗಂಟಲು ಕೆರೆತ ಸೇರಿದಂತೆ ಯಾವುದೆ ರೀತಿಯ ಜ್ವರ ಬಂದರೂ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. 3ದಿನಕ್ಕಿಂತ ಹೆಚ್ಚು ಕಾಲ ಜ್ವರವಿದ್ದರೆ ನಿರ್ಲಕ್ಷ ವಹಿಸದೆ ಕೂಡಲೇ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ಮಾಡಿದರು.
ಪರೀಕ್ಷೆ: ಸರಕಾರಿ ಆಸ್ಪತ್ರೆಗಳಲ್ಲಿ ‘ಡೆಂಗ್ ಜ್ವರ’ ಬಾಧಿತರಿಗೆ ಉಚಿತವಾಗಿ ರಕ್ತ ಪರೀಕ್ಷೆ ಮಾಡಲಿದ್ದು, 48 ಗಂಟೆಗಳ ಒಳಗಾಗಿ ವರದಿ ನೀಡಲಾಗುವುದೆಂದ ಅವರು, ಪ್ರಯೋಗಾಲಯ ಸಿಬ್ಬಂದಿ ಇಲ್ಲದ ಸ್ಥಳಗಳಲ್ಲಿ 108 ಆ್ಯಂಬುಲೆನ್ಸ್‌ನಲ್ಲಿ ರೋಗಿಯನ್ನು ಸಮೀಪದ ಸರಕಾರಿ ಆಸ್ಪತ್ರೆಗಳಿಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಸುಲಿಗೆಗೆ ಕಡಿವಾಣ: ಡೆಂಗ್, ಚಿಕನ್ ಗುನ್ಯಾ ಪರೀಕ್ಷೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ಎಚ್ಚರಿಸಿದ ಅವರು, ಈ ಸಂಬಂಧ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮೊದಲ ಹಂತದ ಪರೀಕ್ಷೆ 200 ರೂ. ಹಾಗೂ ಎರಡನೆ ಹಂತದ ಪರೀಕ್ಷೆಗೆ 500 ರೂ. ನಿಗದಿಪಡಿಸಲಾಗಿದೆ. ಡೆಂಗ್ ರೋಗ ಪೀಡಿತರಿಗೆ ನೀಡುವ ಪ್ಲೇಟ್‌ಲೆಟ್ಸ್ ಅನ್ನು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುವುದೆಂದ ಅವರು, ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಹಣ ವಸೂಲಿ ಮಾಡಿದ ಬಗ್ಗೆ ದೂರು ನೀಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಸ್ವಚ್ಛತಾ ಸಪ್ತಾಹ: ಸಾಂಕ್ರಾಮಿಕ ರೋಗಗಳ ಬಗ್ಗೆ ಜನ ಸಾಮಾನ್ಯರು ಹಾಗೂ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಜೂ.15ರಿಂದ 21ರ ವರೆಗೆ ಒಂದು ವಾರ ‘ಸ್ವಚ್ಛತಾ ಸಪ್ತಾಹ’ವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಜೂ.15ರಂದು ರಾಜ್ಯದ ಎಲ್ಲ ಕೊಳಚೆ ಪ್ರದೇಶದಲ್ಲಿ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.
ಜೂ.16ರಂದು ನಿರ್ಮಾಣ ಹಂತದ ಕಟ್ಟಡ ಪ್ರದೇಶಗಳಲ್ಲಿ, ಜೂ.17ರಂದು ಸರಕಾರಿ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಲ್ಲಿ, ಜೂ.18ರಂದು ಸರಕಾರಿ ಕಚೇರಿಗಳಲ್ಲಿ, ಜೂ.19ರಂದು ಬಸ್, ರೈಲ್ವೆ ನಿಲ್ದಾಣಗಳಲ್ಲಿ, ಜೂ.20ರಂದು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಜೂ.21ರಂದು ಕೈಗಾರಿಕಾ ಪ್ರದೇಶಗಳಲ್ಲಿ ಈ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜನವರಿಯಿಂದ ಈವರೆಗೂ ರಾಜ್ಯದಲ್ಲಿ ಚಿಕನ್ ಗುನ್ಯಾ-304, ಡೆಂಗ್-834 ಹಾಗೂ ಮಲೇರಿಯಾ-2302 ಪ್ರಕರಣಗಳು ವರದಿಯಾಗಿವೆ ಎಂದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚ್ಚು-53 ಚಿಕನ್ ಗುನ್ಯಾ, ಮೈಸೂರಿನಲ್ಲಿ 118 ಡೆಂಗ್ ಹಾಗೂ ಮಂಗಳೂರಿನಲ್ಲಿ 1430 ಮಲೇರಿಯಾ ಪ್ರಕರಣಗಳ ವರದಿಯಾಗಿವೆ. ಆದರೆ, ಯಾರೂ ಸಾವನ್ನಪ್ಪಿಲ್ಲ ಎಂದು ಮಾಹಿತಿ ನೀಡಿದರು.
ನಿಯಂತ್ರಣ: ಡೆಂಗ್, ಚಿನಕ್‌ಗುನ್ಯಾ ಹಾಗೂ ಮಲೇರಿಯಾ ರೋಗ ಹರಡದಂತೆ ಗ್ರಾಮ ಪಂಚಾಯ್ತಿ ಮಟ್ಟದಿಂದಲೇ ನಿಯಮಿತವಾಗಿ ‘ಫಾಗಿಂಗ್’ ವ್ಯವಸ್ಥೆ ಕಲ್ಪಿಸಲಾಗಿದೆ ಎಂದ ಅವರು, ಪ್ರತಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಕನಿಷ್ಠ ಮೂರು ಮೊಬೈಲ್ ಘಟಕಗಳನ್ನು ಸ್ಥಾಪಿಸಲು ಎಲ್ಲ ಜಿಲ್ಲೆಗಳ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಚಿಕನ್ ಗುನ್ಯಾ, ಡೆಂಗ್, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸೂಕ್ತ ನಿಗಾ ವಹಿಸಲು ರಾಜ್ಯದ ಮೂವತ್ತು ಜಿಲ್ಲೆಗಳಿಗೂ ಆರೋಗ್ಯ ಇಲಾಖೆಯಿಂದ 31 ಮಂದಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ ಅಧಿಕಾರಿ ಡಾ.ಪ್ರಕಾಶ್ ಸೇರಿದಂತೆ ಹಲವು ಮಂದಿ ಹಾಜರಿದ್ದರು.
ಡೆಂಗ್, ಚಿಕನ್ ಗುನ್ಯಾ ಪರೀಕ್ಷೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟು ಹಣ ವಸೂಲಿಗೆ ಕಡಿವಾಣ ಹಾಕಲಾಗುವುದು. ಈ ಸಂಬಂಧ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಡೆಂಗ್ ರೋಗ ಪೀಡಿತರಿಗೆ ನೀಡುವ ಪೇಟ್‌ಲೆಟ್ಸ್ ಅನ್ನು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುವುದು.
- ಯು.ಟಿ.ಖಾದರ್, ಆರೋಗ್ಯ ಸಚಿವ







