ಹಾಲಿ ಬಳಕೆಯಲ್ಲಿರುವ ಫೋನ್‌ಗಳಲ್ಲಿಯೂ ಅಪಾಯದ ಗುಂಡಿಯಂತಹ ಸೌಲಭ್ಯಕ್ಕೆ ಆದೇಶ

ಹೊಸದಿಲ್ಲಿ,ಜೂ.9: ತುರ್ತು ಸಂದರ್ಭಗಳಲ್ಲಿ ಬಳಕೆದಾರರಿಗೆ ನೆರವಾಗಲು ಒಂದೇ ಅಂಕೆಯನ್ನು ಒತ್ತುವ ಮೂಲಕ ಅಪಾಯದ ಗುಂಡಿಯಂತಹ ಸೌಲಭ್ಯವನ್ನು ಒದಗಿಸಲು ಈಗ ಬಳಕೆಯಲ್ಲಿರುವ ಎಲ್ಲ ಫೋನ್‌ಗಳಲ್ಲಿ ಸಾಫ್ಟ್‌ವೇರ್‌ನ್ನು ಅಳವಡಿಸುವಂತೆ ದೂರಸಂಪರ್ಕ ಇಲಾಖೆಯು ಮೊಬೈಲ್ ಫೋನ್‌ಗಳ ತಯಾರಕರಿಗೆ ನಿರ್ದೇಶ ನೀಡಿದೆ.
2017,ಜನವರಿ 1ರಿಂದ ಮಾರಾಟವಾಗುವ ಎಲ್ಲ ನೂತನ ಫೋನ್‌ಗಳಲ್ಲಿ ಅಪಾಯದ ಬಟನ್ ಅಳವಡಿಸುವಂತೆ ಇಲಾಖೆಯು ಈ ಹಿಂದೆ ಕಂಪನಿಗಳಿಗೆ ಆದೇಶಿಸಿತ್ತು.
ಹಾಲಿ ಬಳಕೆಯಲ್ಲಿರುವ ಫೋನ್‌ಗಳಲ್ಲಿ ಹೊಸ ಸಾಫ್ಟ್‌ವೇರ್ ಅಳವಡಿಕೆಗಾಗಿ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಇಲಾಖೆಯು ತನ್ನ ಇತ್ತೀಚಿನ ಆದೇಶದಲ್ಲಿ ಸೂಚಿಸಿದ್ದು, ಈ ಆದೇಶ ಪಾಲನೆಗೆ ಯಾವುದೇ ಗಡುವನ್ನು ವಿಧಿಸಿಲ್ಲ.
ನೂತನ ಸಾಫ್ಟ್‌ವೇರ್ ಬಳಕೆಯಿಂದಾಗಿ ಅಪಾಯದ ಸಂದರ್ಭಗಳಲ್ಲಿ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ‘9’ ಅಥವಾ ‘5’ ಅಂಕೆಯನ್ನು ಒತ್ತಿದರೆ ಏಕೈಕ ತುರ್ತು ದೂರವಾಣಿ ಸಂಖ್ಯೆ ‘112 ’ಕ್ಕೆ ಕರೆಯು ಹೋಗುತ್ತದೆ.
ಜ.1ರಿಂದ 112 ಸಂಖ್ಯೆಯ ಸೌಲಭ್ಯವು ಸಕ್ರಿಯಗೊಳ್ಳಲಿದೆ. ಇದರೊಂದಿಗೆ ಹಾಲಿ ಬಳಕೆಯಲ್ಲಿರುವ ತುರ್ತು ದೂರವಾಣಿ ಸಂಖ್ಯೆಗಳಾದ 100(ಪೊಲೀಸ್), 102(ಆ್ಯಂಬುಲನ್ಸ್), 108(ಅಗ್ನಿ ಶಾಮಕ ಸೇವೆ), 1512(ರೈಲ್ವೆ ಅಪರಾಧ ತಡೆ) ಇತ್ಯಾದಿಗಳು ಹಂತಹಂತವಾಗಿ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ.







