ಶೌಚಾಲಯದಲ್ಲಿ ಹಸುಗೂಸಿನ ಮೃತದೇಹ ಪತ್ತೆ
ಕುಶಾಲನಗರ, ಜೂ 9: ಪಟ್ಟಣದ ಹೃದಯ ಭಾಗದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಒಳಭಾಗದಲ್ಲಿರುವ ಶೌಚಾಲಯದಲ್ಲಿ ತಾಯಿಯೊಬ್ಬಳು ತನ್ನ ಹಸುಗೂಸನ್ನು ಶೌಚಾಲಯದ ಒಳಗಡೆ ಹಾಕಿ ಹೋಗಿರುವ ಘಟನೆ ವರದಿಯಾಗಿದೆ.
ಸಂಜೆ ವೇಳೆ ಶೌಚಾಲಯ ಶುಚಿಗೊಳಿಸಲು ಹೋದಂತಹ ಸಮಯದಲ್ಲಿ ಹೆಣ್ಣು ಹಸುಗೂಸು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಈ ವಿಷಯವನ್ನು ಕುಶಾಲನಗರದ ಪೊಲೀಸ್ ಠಾಣಾಧಿಕಾರಿ ಪೂಣಚ್ಚರವರಿಗೆ ದೂರವಾಣಿ ಮೂಲಕ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಬಿಜೆಪಿ ನಗರ ಅಧ್ಯಕ್ಷ ಕೆ.ಜಿ. ಈ ಸಂಬಂಧ ಮನು ದೂರು ನೀಡಿದ್ದು ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಜಿ. ಮನು ಮಾತನಾಡಿ, ಎಷ್ಟೋ ತಂದೆ-ತಾಯಂದಿರು ಮಗುವಿಗಾಗಿ ದೇವರ ಮೊರೆ ಹೋಗುತ್ತಾರೆ, ಆದರೂ ಸಹ ಮಕ್ಕಳಾಗದೆ ಕಣ್ಣೀರಿವ ಸ್ಥಿತಿ ನೋಡಿರುತ್ತೇವೆ. ತಾಯಿ ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಇಟ್ಟುಕೊಂಡು ಜನ್ಮ ನೀಡಿದ ನಂತರ ಹೆಣ್ಣು ಮಗುವೆಂದು ಈ ರೀತಿಯ ಕೃತ್ಯ ಎಸಗಿದ್ದಾರೆಂಬ ಅನುಮಾನ ಮೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ಟಿ.ಎಲ್ ತ್ಯಾಗರಾಜು ಮಾತನಾಡಿ, ಅಭಿವೃದ್ಧಿಯತ್ತ ಗಮನಹರಿಸಬೇಕಾದಂತಹ ಕುಶಾಲನಗರದ ಕರಾರಸಾ ಅಧಿಕಾರಿಗಳು ಇಂತಹ ಘಟನೆಗಳ ಬಗ್ಗೆ ನಿರ್ಲಕ್ಷ ವಹಿಸಿರುವುದು ಕಂಡುಬರುತ್ತಿದ್ದು, ಬಸ್ ನಿಲ್ದಾಣದ ಸುತ್ತ-ಮುತ್ತ ಹಾಗೂ ಒಳಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದಂತಹ ಸಂದರ್ಭದಲ್ಲಿ ಇಂತಹ ಕೃತ್ಯ ಎಸಗಿದವರನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಗುತ್ತಿತ್ತು. ಈ ಪ್ರಕರಣದಿಂದ, ಬಸ್ ನಿಲ್ದಾಣ ಅಭದ್ರತೆಯಿಂದ ಕೂಡಿದೆ ಎಂಬುದು ಸಾಬೀತಾಗಿದೆ.
ಘಟನೆ ಬಗ್ಗೆ ತನಿಖೆ ಕೈಗೊಂಡಿರುವ ಠಾಣಾಧಿಕಾರಿ ಪೂಣಚ್ಚರವರು ಹಸುಗೂಸಿನ ಮೃತದೇಹವನ್ನು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡುಹೋಗಿ, ಬಳಿಕ ಹೆಚ್ಚಿನ ತನಿಖೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹಸುಗೂಸಿನ ತಾಯಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.







