ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಗ್ರಾಪಂ ನೌಕರರಿಂದ ಧರಣಿ

ಮಡಿಕೇರಿ ಜೂ.9 : ಕನಿಷ್ಠ ವೇತನ ಮಾಸಿಕ 18 ಸಾವಿರ ರೂ. ವೇತನ ಹಾಗೂ ಬಿಲ್ ಕಲೆಕ್ಟರ್‌ಗಳನ್ನು ಅನುಭವದ ಆಧಾರದಲ್ಲಿ ಕಾರ್ಯದರ್ಶಿ ಹುದ್ದೆಗೆ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರರ ಸಂಘ ನಗರದಲ್ಲಿ ಧರಣಿ ನಡೆಸಿತು.
ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೌಕರರು ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಲೆಕ್ಕ ಸಹಾಯಕರ ಹುದ್ದೆಯನ್ನು ಶೇ.50 ರಷ್ಟು ಪಂಚಾಯತ್ ನೌಕರರಿಗೆ ಮೀಸಲಿಡಬೇಕು. 10ನೆ ತರಗತಿ ತೇರ್ಗಡೆಯಾಗಿರುವ ವಾಟರ್ ಮನ್‌ಗಳನ್ನು ಬಿಲ್ ಕಲೆಕ್ಟರ್‌ಗಳನ್ನಾಗಿ ನೇಮಿಸಬೇಕು, ರಾಜ್ಯ ಸರಕಾರ ಈಗಾಗಲೇ ಹೊರಡಿಸಿರುವ ಆದೇಶಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕು, ಖಾಲಿ ಇರುವ ಕಾರ್ಯದರ್ಶಿ ಹುದ್ದೆಯನ್ನು ತುರ್ತಾಗಿ ಭರ್ತಿ ಮಾಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿದ ಫಲವಾಗಿ ಕೆಲವು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಿದೆ, ಇದು ಸ್ವಾಗತಾರ್ಹವಾಗಿದೆ. ಆದರೆ ಇನ್ನಷ್ಟು ಬೇಡಿಕೆಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿದ್ದು, ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಧರಣಿನಿರತರು ನಗರದಲ್ಲಿ ಮೆರವಣಿಗೆ ನಡೆಸಿದರು.
ಧರಣಿನಿಯಲ್ಲಿ ಸಂಘದ ಕಾರ್ಯದರ್ಶಿ ಸಿ.ಆರ್.ರವಿ, ಉಪಾಧ್ಯಕ್ಷರಾದ ಕೆ.ಎಂ. ಚೆನ್ನಪ್ಪ, ಎಂ.ಆರ್.ರವಿ, ಉಪ ಕಾರ್ಯದರ್ಶಿ ಪಿ. ಉಮೇಶ್ ಮತ್ತಿತರ ಪ್ರಮುಖರು ಹಾಗೂ ಗ್ರಾಪಂ ನೌಕರರು ಹಾಜರಿದ್ದರು.







