ಸ್ವಯಂ ಪ್ರೇರಿತ ರಕ್ತದಾನ ಸಮಾಜಕ್ಕೆ ನೀಡುವ ಕೊಡುಗೆ: ಡಾ. ನಾಗೇಂದ್ರಪ್ಪ

ಸೊರಬ, ಜೂ.9: ಪ್ರತಿಯೊಬ್ಬ ವ್ಯಕ್ತಿಯು ವೈಯಕ್ತಿಕ ಹಿತಾಸಕ್ತಿಯನ್ನು ಮರೆತು, ಸ್ವಯಂ ಪ್ರೇರಿತವಾಗಿ ಮಾಡಿದ ರಕ್ತದಾನ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯಾಗಿದೆ ಎಂದು ಸುಧನ್ಯ ಮೆಟರ್ನಿಟಿ ಮತ್ತು ಸುಧನ್ವ ಆಸ್ಪತ್ರೆ ವೈದ್ಯ ಡಾ. ನಾಗೇಂದ್ರಪ್ಪ ಅಭಿಪ್ರಾಯ ಪಟ್ಟರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಪಟ್ಟಣದ ಸುಧನ್ಯ ಮೆಟರ್ನಿಟಿ ಮತ್ತು ಸುಧನ್ವ ಆಸ್ಪತ್ರೆಯಲ್ಲಿ ಶಿವಮೊಗ್ಗ ರೋಟರಿ ಬ್ಲಡ್ ಬ್ಯಾಂಕ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತ ಮನುಷ್ಯನಲ್ಲಿ ಸದಾ ಉತ್ಪತ್ತಿಯಾಗುವಂತಹದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಾನ ಮಾಡಲು ಸಿದ್ಧವಿರಬೇಕು. ಯಾವುದೇ ಸಹಜೀವಿ ವ್ಯಕ್ತಿಯ ಪ್ರಾಣ ಅಪಾಯಕ್ಕೊಳಗಾದಾಗ ಉಳಿಸಬೇಕಾಗಿದ್ದುಮನುಷ್ಯನ ಕರ್ತವ್ಯವಾಗಿದೆ. ವ್ಯಕ್ತಿಯ ದೇಹಕ್ಕೆ ರಕ್ತದ ಆವಶ್ಯಕತೆ ಉಂಟಾಗಿ ಜೀವನ್ಮರಣದ ಸಮಸ್ಯೆ ಎದುರಾದಾಗ ಅಂತಹವರ ಪ್ರಾಣ ಉಳಿಸಲು ರಕ್ತದಾನ ಮಾಡುವುದು ಪವಿತ್ರ ಕೆಲಸವಾಗಿದೆ. ಇದರಿಂದ ಇನ್ನೊಬ್ಬ ವ್ಯಕ್ತಿಯನ್ನು ಕಾಪಾಡುವುದಲ್ಲದೆ ರಕ್ತದಾನಿ ಆರೋಗ್ಯವಂತನಾಗಿ ಚೈತನ್ಯಶೀಲತೆ ಹೊಂದಬಹುದು ಎಂದ ಅವರು, ಈ ತಾಲೂಕಿನಲ್ಲಿ ರಕ್ತದ ಅಗತ್ಯತೆ ಹೆಚ್ಚಿದ್ದು, ಅದರ ಅರಿವನ್ನು ತಿಳಿದು, ಆರೋಗ್ಯವಂತ ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಸೊರಬ ರೋಟರಿ ಕ್ಲಬ್ ಅಧ್ಯಕ್ಷ ಡಾ. ಜ್ಞಾನೇಶ್, ಶಿವಮೊಗ್ಗ ರೋಟರಿ ಕ್ಲಬ್‌ನ ಡಾ. ಸತೀಶ್ ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ದಿನಕರ ಭಟ್ ಬಾವೆ, ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಎಚ್.ಎಸ್ ಮಂಜಪ್ಪ, ಜೇಸಿಐ ವೈಜಯಂತಿಯ ಅಧ್ಯಕ್ಷ ವಾಸುದೇವ್ ಬೆನ್ನೂರು, ಮಾಜಿ ಅಧ್ಯಕ್ಷ ಡಿ.ಎಸ್. ಶಂಕರ್, ನಮ್ಮೂರ ಸಮುದಾಯ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಮಹೇಶ್, ಬಂದಗಿ ಬಸವರಾಜ್‌ಶೇಟ್, ಬಣ್ಣದ ಬಾಬು ಮತ್ತಿತರರು ಉಪಸ್ಥಿತರಿದ್ದರು.







