ದುಶ್ಚಟಗಳಿಂದ ಯುವ ಜನರು ದೂರವಿರಲಿ: ಅರವಿಂದ್

ಮೂಡಿಗೆರೆ, ಜೂ.9: ಧೂಮಪಾನ ಮತ್ತು ಮದ್ಯಪಾನ ವ್ಯಸನದಿಂದ ಯುವಕರು ದೂರವಿರಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಅರವಿಂದ್ ಎನ್.ವಿ. ಹೇಳಿದ್ದಾರೆ.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೊಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸರಕಾರಿ ಪಿಯು ಕಾಲೇಜು ಆವರಣದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಧೂಮಪಾನ ಮದ್ಯಪಾನದಂತಹ ದುಶ್ಚಟಗಳಿಗೆ ಒಳಗಾಗಬಾರದು. ಸಮಾಜದಲ್ಲಿ ಸಿಗರೇಟು ಚಟಕ್ಕೆ ಬಲಿಯಾದವರು ತಾವು ಹಾಳಾಗುವುದಲ್ಲದೆ, ಅಕ್ಕ ಪಕ್ಕದವರ ಆರೋಗ್ಯ ಹಾನಿಗೆ ಕಾರಣರಾಗುತ್ತಿದ್ದಾರೆ. ಸಮಾಜದಲ್ಲಿಮಕ್ಕಳು ಮತ್ತು ಯುವಕರು ಈ ವ್ಯಸನದ ವಿರುದ್ಧ ಹೋರಾಟ ಮಾಡಿದಲ್ಲಿ ಗ್ರಾಮವನ್ನು ವ್ಯಸನ ಮುಕ್ತವಾಗಿಸಬಹುದು ಎಂದರು.
ಯುವಜನತೆ ಪರಿಸರದತ್ತ ಗಮನ ಹರಿಸಿ ತಮ್ಮ ಗ್ರಾಮಗಳಲ್ಲಿ ಅರಣ್ಯೇತರ ಚಟುವಟಿಕೆಗಳು ನಡೆದಲ್ಲಿ ಅರಣ್ಯ ಇಲಾಖೆ, ಪಿಡಿಒ ಗ್ರಾಪಂ ಇಲ್ಲವೇ ಅರಣ್ಯ ಸಮಿತಿ ಗಮನಕ್ಕೆ ತರಬೇಕು. ಪರಿಸರ ಸಂರಕ್ಷಣೆ ಮಾರ್ಗದಲ್ಲಿ ಮಳೆ ಕೊಯ್ಲಿನಂತಹ ಜಲಸಾಕ್ಷರತೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲೆ ಮಂಜುಳಾ ವಹಿಸಿದ್ದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಯೋಗೇಶ್, ವಕೀಲರ ಸಂಘದ ಅಧ್ಯಕ್ಷ ಚಂದ್ರು, ವಕೀಲ ಜಯರಾಮ್, ನಟರಾಜ್, ಪೂರ್ಣೇಶ್, ದೇವರಾಜ್, ಮಧು, ಪ್ರಭಾಕರ್, ಜಲಜಾಕ್ಷಿ, ಮತ್ತಿತರರು ಉಪಸ್ಥಿತರಿದ್ದರು.







