ನೂತನ ಭೂ ಸ್ವಾಧೀನ ಕಾಯ್ದೆ ಜಾರಿಗೆ ರೈತ ಸಂಘ ಆಗ್ರಹ
ಶಿವಮೊಗ್ಗ, ಜೂ. 9: ರಾಜ್ಯ ಸರಕಾರವು ನೂತನ ಭೂ ಸ್ವಾಧೀನ ಮಸೂದೆ ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿರುವ ಕ್ರಮ ಸರಿಯಲ್ಲ. ಇದು ರೈತ ವಿರೋಧಿಯಾಗಿದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ವಿರೋಧವಾಗಿ ಬೇಕಾದಷ್ಟು ಕಾನೂನುಗಳು ಜಾರಿಯಲ್ಲಿವೆ. ಆದರೆ 2013ರ ಭೂ ಸ್ವಾಧೀನ ಕಾಯ್ದೆ ಒಂದಿಷ್ಟು ರೈತರ ಪರವಾಗಿತ್ತು. ಅದರ ಪ್ರಕಾರ ಭೂಮಿಯನ್ನು ಬಿಟ್ಟುಕೊಟ್ಟ ರೈತರಿಗೆ 4ಪಟ್ಟು ಹೆಚ್ಚು ಬೆಲೆ ಕೊಡಬೇಕು. ಅವರ ಮಕ್ಕಳಿಗೆ ಉದ್ಯೋಗ ಕೊಡಬೇಕು ಮತ್ತು ಭೂಮಿ ವಶಪಡಿಸಿಕೊಳ್ಳಲು ಗ್ರಾಮಸಭೆಯಲ್ಲಿ ಶೇ. 70ರಷ್ಟು ಅನುಮತಿ ನೀಡಬೇಕು ಎಂದು ಹೇಳಲಾಗಿತ್ತು. ಇದರಿಂದ ರೈತರಿಗೊಂದಿಷ್ಟು ವರದಾನವಾಗಿತ್ತು ಎಂದರು.
ಒಂದು ರಸ್ತೆ ಮಾಡಲು ಸಾವಿರಾರು ಎಕರೆ ಜಮೀನು ಬೇಕಾಗುತ್ತದೆ. ಈ ಕಾಯ್ದೆ ಪ್ರಕಾರ ಜಮೀನು ವಶಪಡಿಸಿಕೊಂಡರೆ ಆ ರಸ್ತೆಯನ್ನು ನಿರ್ಮಿಸುವ ಗುತ್ತಿಗೆದಾರ ಟೋಲ್ ನಿಗದಿಪಡಿಸುತ್ತಾನೆ. ಹೀಗೆ ನಿಗದಿಪಡಿಸುವಾಗ ರೈತ ಕೂಡ ಅದಕ್ಕೆ ಪಾಲುದಾರನಾಗಿರುತ್ತಾನೆ. ಇದನ್ನು ತಪ್ಪಿಸುವ ಉದ್ದೇಶದಿಂದ ದೊಡ್ಡ ದೊಡ್ಡ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ರೈತ ವಿರೋಧಿ ನೀತಿಯನ್ನು ರಾಜ್ಯ ಸರಕಾರ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.
ಉಳುವವನೇ ಭೂಮಿಯ ಒಡೆಯ ಎಂಬುದನ್ನು ನಂಬಿ ಸರಕಾರಿ ಜಮೀನು ಉಳುಮೆ ಮಾಡುತ್ತಿರುವ ಲಕ್ಷಾಂತರ ಬಡವರಿಗೆ ಭೂಮಿ ಸಿಕ್ಕಿಲ್ಲ. ಸುಮಾರು 4,59,936 ಉಳುಮೆದಾರರು ಭೂಮಿಗಾಗಿ ಕಾಯುತ್ತಿದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಕಾನೂನು ಸಚಿವರು, ಕಂದಾಯ ಸಚಿವರು ಉಳುಮೆದಾರರಿಗೆ ಭೂಮಿ ಮಂಜೂರು ಮಾಡಬಾರದು ಎಂದು ಹೇಳುತ್ತಿದ್ದಾರೆ ಎಂದು ದೂರಿದರು. ಈ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು 2013ರ ಕಾನೂನನ್ನು ಜಾರಿಗೆ ತರುವಂತೆ ಮತ್ತು ಬಡವರಿಗೆ, ಅರಣ್ಯ ವಾಸಿಗಳಿಗೆ ಭೂಮಿ ಸಿಗಲು ಅನುಕೂಲವಾಗುವಂತೆ ಇರುವ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಲು, ಈ ಬಗ್ಗೆ ಚರ್ಚಿಸಲು ಜುಲೈ 1ರಂದು ಬೆಂಗಳೂರಿನಲ್ಲಿ ಬಹುದೊಡ್ಡ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಸುಮಾರು 50ಸಾವಿರ ರೈತರು ಸೇರುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಬಿ.ಶಿವಶಂಕರ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.







