ಪ್ರಗತಿಪರ ಹೋರಾಟಕ್ಕೆ ದಸಂಸ ಸಂಸ್ಥಾಪಕರ ಮುನ್ನುಡಿ: ಟಿ.ಮಂಜಪ್ಪ

ತರೀಕೆರೆ, ಜೂ.9: ರಾಜ್ಯದಲ್ಲಿ ಹಲವಾರು ಪ್ರಗತಿಪರ ಹೋರಾಟಗಳಿಗೆ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪಅವರು ಮುನ್ನುಡಿ ಬರೆದಿದ್ದಾರೆ ಎಂದು ದಸಂಸ ಹಿರಿಯ ಮುಖಂಡ ಟಿ.ಮಂಜಪ್ಪ ಹೇಳಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ತಾಲೂಕು ಮಾದಿಗ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಪ್ರೊ.ಬಿ.ಕೃಷ್ಣಪ್ಪ ರವರ 78ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಎಲ್ಲ ಜಾತಿಯ ಬಡವರ ಪರವಾಗಿದ್ದ ಅವರ ಹೋರಾಟಗಳು ಸಮಾಜಮುಖಿಯಾಗಿದ್ದವು. ಚಂದ್ರಗುತ್ತಿಯ ಬೆತ್ತಲೆ ಸೇವೆ ಯಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಶ್ರಮಿಸಿದರು ಎಂದರು.
ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದಲ್ಲಿ ಹುಟ್ಟು ಹಾಕುವ ಮೂಲಕ ದಲಿತರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟದ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಜಿಲ್ಲಾ ಸಂಚಾಲಕ ಕೆ.ನಾಗರಾಜ್ ಮಾತನಾಡಿ, ಕೃಷ್ಣಪ್ಪಅವರ ಆದರ್ಶಗಳನ್ನು ಎಲ್ಲರೂ ರೂಢಿಸಿಕೊಂಡಾಗ ಜಯಂತಿ ಆಚರಣೆಯ ನಿಜವಾದ ಅರ್ಥ ಬರುತ್ತದೆ ಎಂದರು.
ತಾಪಂ ಉಪಾಧ್ಯಕ್ಷೆ ಶಿವಮ್ಮ ಕೃಷ್ಣಮೂರ್ತಿ, ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ಅಣ್ಣಯ್ಯ, ಗ್ರಾಪಂ ಸದಸ್ಯ ಟಿ.ಕೃಷ್ಣಮೂರ್ತಿ, ರಂಗಪ್ಪಮತ್ತಿತರರು ಉಪಸ್ಥಿತರಿದ್ದರು.







