ಅನುಪಮಾ ಶೆಣೈ ರಾಜೀನಾಮೆ ಅಂಗೀಕಾರ; ಫೇಸ್‌ಬುಕ್ ಖಾತೆ ನನ್ನದಲ್ಲ: ಅನುಪಮಾ

ಬೆಂಗಳೂರು, ಜೂ.9: ಡಿವೈಎಸ್ಪಿ ಅನುಪಮಾ ಶೆಣೈ ತನ್ನ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಸರಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದೆ. ರಾಜೀನಾಮೆ ಸಲ್ಲಿಸಿದ ಬಳಿಕ ನಾಪತ್ತೆಯಾಗಿದ್ದ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಗುರುವಾರ ಮುಂಜಾನೆ ಪ್ರತ್ಯಕ್ಷರಾಗಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸು ಪಡೆಯುವುದಿಲ್ಲ. ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದು, ಫೇಸ್‌ಬುಕ್ ಖಾತೆಯೂ ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಮುಂಜಾನೆ 4ರ ಸುಮಾರಿನಲ್ಲಿ ತನ್ನ ಸಹೋದರನೊಂದಿಗೆ ಕೂಡ್ಲಿಗಿ ವಸತಿ ಗೃಹಕ್ಕೆ ಖಾಸಗಿ ಕಾರಿನಲ್ಲಿ ಅನುಪಮಾ ಶೆಣೈ ಆಗಮಿಸಿದರು.
ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಸೂಚನೆಯ ಮೇರೆಗೆ ಬಳ್ಳಾರಿ ಎಸ್ಪಿಚೇತನ್‌ಕುಮಾರ್ ಅವರು ಎರಡು ಪೊಲೀಸ್ ತಂಡಗಳನ್ನು ರಚಿಸಿ ಅವರ ಮನವೊಲಿಸಲು ಪ್ರಯತ್ನ ನಡೆಸಿದರು. ನಿನ್ನೆ ರಾತ್ರಿ ಶಿರಸಿಯಲ್ಲಿ ಪ್ರತ್ಯಕ್ಷರಾಗಿದ್ದ ಅನುಪಮಾ ಶೆಣೈ ಅವರನ್ನು ಸ್ಥಳೀಯ ಪೊಲೀಸರು ಮನವೊಲಿಸಲು ನಡೆಸಿದ ಯತ್ನಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ತನ್ನ ಖಾಸಗಿ ವಾಹನದಲ್ಲಿ ತೆರಳಿದ್ದರು.
ಅಲ್ಲಿಂದ ಸಹೋದರನ ಜೊತೆ ಇಂದು ಮುಂಜಾನೆ ಕೂಡ್ಲಿಗಿ ಪಟ್ಟಣಕ್ಕೆ ಬಂದರು. ಅವರು ಬರುವ ನಿರೀಕ್ಷೆಯಿಂದ ಕಾದು ಕುಳಿತಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಶೆಣೈ, ತಾನು ರಾಜೀನಾಮೆ ನೀಡಿರುವ ನಿರ್ಧಾರ ಅಚಲವಾಗಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ. ಅಲ್ಲದೆ, ಫೇಸ್‌ಬುಕ್‌ನಲ್ಲಿ ಬಂದಿರುವ ಹೇಳಿಕೆಗಳಿಗೂ ತನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದರು.
ರಾಜೀನಾಮೆ ನೀಡಿದ ನಂತರ ಫೇಸ್‌ಬುಕ್‌ನಲ್ಲಿ ತನ್ನ ಅನಿಸಿಕೆಗಳನ್ನು ಹಂಚಿಕೊಂಡು ಕುತೂಹಲ ಮೂಡಿಸಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನನ್ನ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯಿಲ್ಲ. ಬೇರೆಯವರು ನನ್ನ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದಿರಬಹುದು ಅದು ಹ್ಯಾಕ್ ಆಗಿರಬಹುದು’’ ಎಂದು ಉತ್ತರಿಸಿದರು.
ಮುಂದಿನ ಹೋರಾಟ ನ್ಯಾಯಾಲಯದಲ್ಲಿ:ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ ಅವರ ವಿರುದ್ಧ ಹೋರಾಟ ನಡೆಸಿರುವ ನೀವು ಸಚಿವರು ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಸುವಿರಾ ಎನ್ನುವ ಪ್ರಶ್ನೆಗೆ ‘‘ನನ್ನ ಹೋರಾಟ ನಿಲ್ಲುವುದಿಲ್ಲ, ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ’’ ಎಂದು ನುಡಿದರು.
ವೈಯುಕ್ತಿಕ ಕಾರಣಕ್ಕಾಗಿ ರಾಜೀನಾಮೆ: ಜೂ.4 ರಂದು ಕಟ್ಟಡ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ರಾಜಕೀಯ ಪ್ರಭಾವ, ಲಿಕ್ಕರ್ ಲಾಬಿಗಳ ಒತ್ತಡ, ಪ್ರತಿಭಟನೆ ಸೇರಿ ಇನ್ನಿತರ ಕಾರಣಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದೀರಾ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅನುಪಮಾ, ‘‘ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ’’ ಎಂದರು.
ಸ್ವಂತ ಹಿತ ಬೇಡ: ತನ್ನ ರಾಜೀನಾಮೆ ವಿಷಯ ಮುಂದಿಟ್ಟುಕೊಂಡು ಯಾರೂ ಸ್ವಂತ ಹಿತಕ್ಕೆ ಬಳಕೆ ಮಾಡಬಾರದು ಎಂದು ಎಚ್ಚರಿಕೆ ನೀಡಿರುವ ಅನುಪಮಾ, ಕೂಡ್ಲಿಗಿಯಿಂದ ಸ್ವಂತ ಊರು ಭಟ್ಕಳ್‌ಗೆ ಪ್ರಯಾಣ ಬೆಳೆಸಿದರು.







