ಆಡು ನುಂಗಲು ಯತ್ನಿಸಿದ 20 ಅಡಿ ಉದ್ದದ ಹೆಬ್ಬಾವು ಹಿಡಿದ ಗ್ರಾಮಸ್ಥರು
ಜಲ್ಪೈಗುರಿ(ಪಶ್ಚಿಮ ಬಂಗಾಳ), ಜೂ.10: ಸುಮಾರು 20 ಅಡಿ ಉದ್ದದ ಹೆಬ್ಬಾವು ಆಡನ್ನು ನುಂಗಲು ವಿಫಲಯತ್ನ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ. ಆಡನ್ನು ನುಂಗಲು ಯತ್ನಿಸುತ್ತಿದ್ದ ಹೆಬ್ಬಾವನ್ನು ಗಮನಿಸಿದ ಗ್ರಾಮಸ್ಥರು ಅದನ್ನು ಸೆರೆ ಹಿಡಿದು ಹತ್ತಿರದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಸೋನಖಲಿ ಅರಣ್ಯದ ಅಂಚಿನಲ್ಲಿ ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಮಲಿಕ್ ಶೋಭಾ ಎಂಬ ಗ್ರಾಮಸ್ಥನಿಗೆ ಆಡು ಅರಚುತ್ತಿದ್ದ ಶಬ್ದ ಕೇಳಿಸಿತು. ಅತ್ತ ಹೋಗಿ ನೋಡಿದರೆ ಹೆಬ್ಬಾವು ಆಡನ್ನು ಸಾಯಿಸಿ ನುಂಗಲು ಯತ್ನಿಸುತ್ತಿರುವುದು ಕಂಡುಬಂತು.
ಗ್ರಾಮಸ್ಥರು ಹತ್ತಿರದ ವನ್ಯಮೃಗ ಸಿಬ್ಬಂದಿಯನ್ನು ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆಗ ಅವರಿಗೆ ಗಸ್ತುನಿರತ ಅರಣ್ಯ ಅಧಿಕಾರಿ ನಾರಾಯಣ್ ಕಾರ್ ನೆರವಿಗೆ ಧಾವಿಸಿದರು.
ಗ್ರಾಮಸ್ಥರೇ ಹಾವಿನ ಬಾಯಿಯಿಂದ ಆಡನ್ನು ಹೊರ ತೆಗೆದರು. ಹೆಬ್ಬಾವಿನ ಕೊರಳಿಗೆ ಹಗ್ಗವನ್ನು ಕಟ್ಟಿ ಎಳೆದು ಸೈಕಲ್ ರಿಕ್ಷಾದಲ್ಲಿ ಹಾಕಿಕೊಂಡು ಸೊನಖಲಿ ಅರಣ್ಯಕ್ಕೆ ಬಿಟ್ಟುಬಂದಿದ್ದಾರೆ.
ವಿಶ್ವದ ಅತ್ಯಂತ ಉದ್ದವಾದ, ಸುಮಾರು 20 ಅಡಿ ಉದ್ದದ ಹೆಬ್ಬಾವು ಮಳೆಕಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಉತ್ತಮವಾಗಿ ಈಜಬಲ್ಲ ಈ ಹಾವು ಒಂದೇ ಸಲ 12 ರಿಂದ 36 ಮೊಟ್ಟೆಗಳನ್ನು ಇಡುತ್ತವೆೆ ಎಂದು ನಾರಾಯಣ್ ಹೇಳಿದ್ದಾರೆ.
ಹೆಬ್ಬಾವು ಅರಣ್ಯದಿಂದ ಹೊರಬಂದು ಸಾಕು ಪ್ರಾಣಿಗಳನ್ನು ಕೊಂದು ತಿನ್ನುವುದು ಇದು ಹೊಸತೇನಲ್ಲ. ಹೆಬ್ಬಾವುಗಳು ಎರಡು-ಮೂರು ದನಗಳು, ಕುರಿಯನ್ನು ತಿಂದುಹಾಕಿವೆ ಎಂದು ಆಡನ್ನು ಕಳೆದುಕೊಂಡ ರಾಹುಲ್ ಅಮಿನ್ ಹೇಳುತ್ತಾರೆ.