ಮಾಲ್ದೀವ್ಸ್ ಅಧ್ಯಕ್ಷರ ಹತ್ಯೆಗೈಯಲು ಸಂಚು ಹೂಡಿದ ಆರೋಪ ಮಾಜಿ ಉಪಾಧ್ಯಕ್ಷರಿಗೆ 15 ವರ್ಷ ಜೈಲು

ಮಾಲೆ, ಜೂ. 10: ಮಾಲ್ದೀವ್ಸ್‌ನ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ರನ್ನು ಹತ್ಯೆಗೈಯಲು ಸಂಚು ಹೂಡಿದ ಆರೋಪದಲ್ಲಿ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್‌ರಿಗೆ ದೇಶದ ನ್ಯಾಯಾಲಯವೊಂದು 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಅಧ್ಯಕ್ಷರ ವೇಗದ ದೋಣಿಯನ್ನು ಗುರಿಯಾಗಿರಿಸಿ ಬಾಂಬ್ ಸ್ಫೋಟ ನಡೆಸಲಾಗಿದ್ದು, ಅದರ ಸಂಚು ರೂಪಿಸಿದವರು ಅಹ್ಮದ್ ಅದೀಬ್ ಎಂಬುದಾಗಿ ಆರೋಪಿಸಲಾಗಿದೆ. ತೀರ್ಪನ್ನು ಗುರುವಾರ ರಾತ್ರಿ ನ್ಯಾಯಾಧೀಶರು ಹೊರಡಿಸಿದ್ದಾರೆ ಎಂದು ಅದೀಬ್‌ರ ವಕೀಲರು ಶುಕ್ರವಾರ ತಿಳಿಸಿದರು.
ನಾಲ್ಕು ದಿನಗಳ ಮೊದಲು ಬಂದೂಕುಗಳನ್ನು ಹೊಂದಿರುವುದಕ್ಕಾಗಿ ಭಯೋತ್ಪಾದನೆ ಆರೋಪದಲ್ಲಿ ಅದೀಬ್‌ರಿಗೆ ನ್ಯಾಯಾಲಯವು 10 ವರ್ಷಗಳ ಶಿಕ್ಷೆ ವಿಧಿಸಿತ್ತು. ಭದ್ರತಾ ಕಾರಣಗಳಿಗಾಗಿ ಪ್ರಕರಣದ ವಿಚಾರಣೆಯನ್ನು ಮುಚ್ಚಿದ ಕೋಣೆಯಲ್ಲಿ ನಡೆಸಲಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಹಸ್ಯ ವಿಚಾರಣೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಕಳವಳ ವ್ಯಕ್ತಪಡಿಸುವ ಸಾಧ್ಯತೆ ಇದೆ. ಅದೀಬ್‌ರನ್ನು ದೋಷಿಯಾಗಿಸಲು ಯಾವ ಸಾಕ್ಷವನ್ನು ಬಳಸಲಾಗಿದೆ ಎಂಬ ಬಗ್ಗೆಯೂ ಸಂಶಯವಿದೆ.
ಅದೀಬ್‌ರನ್ನು ಒಮ್ಮೆ ಹಿಂದೂ ಮಹಾ ಸಾಗರ ದ್ವೀಪ ರಾಷ್ಟ್ರದ ಭವಿಷ್ಯದ ನಾಯಕನಾಗಿ ಗುರುತಿಸಲಾಗಿತ್ತು. ಪ್ರವಾಸಿಗರ ಸ್ವರ್ಗ ಎಂಬ ಮಾಲ್ದೀವ್ಸ್‌ನ ಹೆಗ್ಗಳಿಕೆಗೆ ಈಗ ರಾಜಕೀಯ ಸ್ಥಿತ್ಯಂತರದ ಕಾರ್ಮೋಡ ಆವರಿಸಿದೆ.
‘‘ಏಳು ಅನಾಮಧೇಯ ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ಅವರಿಗೆ 15 ವರ್ಷಗಳ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಸ್ಫೋಟದಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಲಕರಣೆ)ಯೊಂದನ್ನು ಬಳಸಲಾಗಿತ್ತು ಎನ್ನುವುದು ಖಾತ್ರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ’’ ಎಂದು ಅದೀಬ್‌ರ ವಕೀಲ ಮೂಸಾ ಸಿರಾಜ್ ‘ರಾಯ್ಟರ್ಸ್’ಗೆ ತಿಳಿಸಿದರು.
ದೋಣಿಯಲ್ಲಿ ಐಇಡಿಯೊಂದನ್ನು ಇಡುವಂತೆ ತನಗೆ ಮಾಜಿ ಉಪಾಧ್ಯಕ್ಷರು ಸೂಚನೆ ನೀಡಿದ್ದರು ಎಂಬುದಾಗಿ ಓರ್ವ ಸಾಕ್ಷಿ ಹೇಳಿದ್ದಾನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂದರು.
ಹತ್ಯಾ ಯತ್ನದ ಪುರಾವೆಯನ್ನು ಪರಿಶೀಲಿಸುವಂತೆ ಮಾಲ್ದೀವ್ಸ್ ವಿದೇಶಿ ತನಿಖಾ ಸಂಸ್ಥೆಗಳನ್ನು ಆಹ್ವಾನಿಸಿತ್ತು.
ಆದರೆ, ಬಾಂಬ್ ಸ್ಫೋಟದ ಬಗ್ಗೆ ‘‘ನಿರ್ಣಾಯಕ ಪುರಾವೆ ಇಲ್ಲ’’ ಎಂಬುದಾಗಿ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.







