ಈ ಬಾರಿ ಇಲ್ಲ ಬೆಂಗಳೂರು ಫ್ರೇಸರ್ ಟೌನ್ ನ ಜನಪ್ರಿಯ ಇಫ್ತಾರ್ ಮಳಿಗೆಗಳು !
ಆಹಾರ ಪ್ರಿಯರಿಗೆ ಬ್ಯಾಡ್ ನ್ಯೂಸ್

ಬೆಂಗಳೂರು, ಜೂ 10 : ರಮಝಾನ್ ತಿಂಗಳಿಡೀ ಆಹಾರಪ್ರಿಯರ ಹಸಿವಿನ ಜೊತೆ ಮನತಣಿಸುವ ಬೆಂಗಳೂರಿನ ಫ್ರೇಸರ್ ಟೌನ್ ನ ಮಸೀದಿ ರಸ್ತೆಯ ತಾತ್ಕಾಲಿಕ ಇಫ್ತಾರ್ ಮಳಿಗೆಗಳು ಇತಿಹಾಸದ ಪುಟ ಸೇರಿವೆ. ಹತ್ತು ಹಲವು ಬಗೆಯ ಖಾದ್ಯಗಳ ಮೂಲಕ ರಮಝಾನ್ ಆಚರಿಸುವವರು ಮಾತ್ರವಲ್ಲದೆ ಎಲ್ಲ ಧರ್ಮಗಳ ಜನರ ಮನಗೆದ್ದಿದ್ದ ಈ ಮಳಿಗೆಗಳಿಗೆ ಈ ಬಾರಿ ಅವಕಾಶ ನಿರಾಕರಿಸಲಾಗಿದೆ. ಮುಖ್ಯ ರಸ್ತೆಯಲ್ಲೇ ಇರುವ ಈ ಮಳಿಗೆಗಳಿಂದ ಸಂಚಾರ ಅಸ್ತವ್ಯಸ್ತವಾಗುವುದು ಇದಕ್ಕೆ ಪ್ರಮುಖ ಕಾರಣವಾದರೆ ಮಸೀದಿಗೆ ಆರಾಧನೆಗೆ ಬರುವವರಿಗೆ ತೊಂದರೆ ಆಗುತ್ತಿರುವುದು ಇನ್ನೊಂದು ಕಾರಣ ಎಂದು ತಿಳಿದು ಬಂದಿದೆ.
" ಈ ಬಾರಿ ಮಳಿಗೆಗಳಿಗೆ ಅವಕಾಶ ನೀಡದೆ ಇರಲು ನಿರ್ಧರಿಸಿದ್ದೇವೆ. ಈ ಮಳಿಗೆಗಳಿಗೆ ಸಾವಿರಾರು ಜನ ಬಂದು ಅಲ್ಲಲ್ಲಿ ತಮ್ಮ ವಾಹನ ನಿಲ್ಲಿಸುತ್ತಾರೆ. ಇದರಿಂದ ಸ್ಥಳೀಯರಿಗೆ ಹಾಗು ಮಸೀದಿಗೆ ಬರುವವರಿಗೆ ತೀವ್ರ ತೊಂದರೆ ಆಗುತ್ತಿತ್ತು. ಆದ್ದರಿಂದ ಇನ್ನು ಅವಕಾಶ ನೀಡದೆ ಇರಲು ಸಭೆ ನಡೆಸಿ ತೀರ್ಮಾನಿಸಿದ್ದೇವೆ " ಎಂದು ಇಲ್ಲಿನ ಮಸೀದಿಯ ಆಡಳಿತ ಸಮಿತಿಯ ಸದಸ್ಯ ಅಸ್ಲಂ ಫ಼ಝಲ್ ಹೇಳಿದ್ದಾರೆ.
ವೈವಿಧ್ಯಮಯ ಕಬಾಬ್ ಗಳು, ಬಿರಿಯಾನಿಗಳು, ಸಿಹಿ ತಿಂಡಿಗಳು, ಟೀ , ಕರಿದ ತಿಂಡಿಗಳನ್ನು ಮಾರುವ ಮಸೀದಿ ರಸ್ತೆಯ ತಾತ್ಕಾಲಿಕ ಇಫ್ತಾರ್ ಮಳಿಗೆಗಳು ಬೆಂಗಳೂರು ಮಾತ್ರವಲ್ಲ ಮಂಗಳೂರು, ಚೆನ್ನೈ ಗಳಿಂದಲೂ ಜನರನ್ನು ಆಕರ್ಷಿಸುತ್ತಿದ್ದವು. ಕೇವಲ ಈ ಮಳಿಗೆಗಳ ಆಹಾರದ ರುಚಿ ನೋಡಲೆಂದೇ ಜನರು ಮಂಗಳೂರು, ಚೆನ್ನೈ ಗಳಿಂದ ರಮಝಾನ್ ನಲ್ಲಿ ಒಂದು ದಿನದ ಬೆಂಗಳೂರು ಭೇಟಿಗೆ ಬರುತ್ತಿದ್ದರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಟೆಕ್ಕಿಗಳು , ವಿದ್ಯಾರ್ಥಿಗಳ ವಲಯದಲ್ಲೂ ಇದು ಭಾರೀ ಖ್ಯಾತಿ ಪಡೆದಿತ್ತು.
ಆದರೆ ಈಗ ಅದಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಯಾರೂ ಅನಧಿಕೃತವಾಗಿ ಮಳಿಗೆ ತೆರೆಯದಂತೆ ಮಸೀದಿಯವರು ಪೊಲೀಸರು ಹಾಗು ಬಿಬಿಎಂಪಿ ಯವರ ಜೊತೆ ಸಂಪರ್ಕದಲ್ಲಿದ್ದಾರೆ. ಫ್ರೇಸರ್ ಟೌನ್ ನಲ್ಲಿರುವ ಹಲವಾರು ಹೋಟೆಲ್ ಗಳು ಮಾತ್ರ ರಮಝಾನ್ ನ ಗ್ರಾಹಕರಿಗಾಗಿ ತಡ ರಾತ್ರಿವರೆಗೂ ತೆರೆದಿರುತ್ತವೆ.







