ನಿರ್ವಸಿತರಿಗೆ ರಾತ್ರಿ ತಂಗುಧಾಮ ಶೀಘ್ರ ಉದ್ಘಾಟನೆ: ಮೇಯರ್ ಹರಿನಾಥ್

ಮಂಗಳೂರು, ಜೂ.10: ನಗರದ ಬಂದರಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ವಸಿತರಿಗಾಗಿನ ರಾತ್ರಿ ತಂಗುಧಾಮ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆ ನಡೆಯಲಿದೆ ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.
ಮನಪಾದಲ್ಲಿನ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಪಾದ ಬಡತನ ನಿರ್ಮೂಲನಾ ಕೋಶದಡಿ ನಿರ್ಮಾಣವಾಗಿರುವ ತಂಗುಧಾಮ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ದಿನಾಂಕವನ್ನು ಕೇಳಲಾಗಿದೆ ಎಂದರು.
ಮನಪಾ ಕಾಮಗಾರಿ ಮಂಜೂರಾತಿ ಮಿತಿ 5 ಕೋಟಿಗೆ ಹೆಚ್ಚಿಸಲು ಮನವಿ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ನಡೆಯುತ್ತಿದ್ದು, ಈ ಕಾಮಗಾರಿಗಳ ಮಂಜೂರಾತಿಗೆ ಬೆಂಗಳೂರಿಗೆ ಕಡತಗಳನ್ನು ಎರಡು ಮೂರು ಬಾರಿ ಕಳುಹಿಸಬೇಕಾಗಿದೆ. ಇದರಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಹಾಗಾಗಿ ಪಾಲಿಕೆಯ ಪರಿಷತ್ತಿಗಿರುವ ಮಂಜೂರಾತಿ ಮಿತಿಯನ್ನು 1 ಕೋಟಿಯಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಸಲು ಮನವಿ ಮಾಡಲಾಗಿದೆ. ಇದೇ ವೇಳೆ ಪ್ರೀಮಿಯಂ ಎಫ್‌ಎಆರ್ ಮೊತ್ತವು ಉಪಯೋಗಿಸದೇ ಬಾಕಿ ಉಳಿದಿದ್ದಲ್ಲಿ ಅದನ್ನು ಅಗತ್ಯವಿರುವ ರಸ್ತೆಗಳಿಗೆ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಉಪಯೋಗಿಸುವಂತೆ ಪ್ರೀಮಿಯಂ ಎಫ್‌ಎಆರ್‌ನ ನೀತಿಯಲ್ಲಿ ಸರಳೀಕರಣಗೊಳಿಸಲು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಕದ್ರಿ, ಕಂಕನಾಡಿ ಮಾರುಕಟ್ಟೆ ಈಗಾಗಲೇ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ಹಂತದಲ್ಲಿದೆ. ಕಾವೂರು ಹಾಗೂ ಕಾವೂರು ಜಂಕ್ಷನ್ ಮಾರುಕಟ್ಟೆಯ ಕೆಲಸಕ್ಕೆ ಮಂಜೂರಾತಿ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಮನಪಾ ವ್ಯಾಪ್ತಿಯ ಹಿತದೃಷ್ಟಿಯಿಂದ ಲಕ್ಯಾ ಡ್ಯಾಂನಿಂದ ಕುಡಿಯುವ ನೀರು ಪಡೆಯಲು ಪಾಲಿಕೆಗೆ ಅನುಮತಿ ನೀಡುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ವಿವರ ನೀಡಿದರು.
ಗೋಷ್ಠಿಯಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿಲೋಟ್ ಪಿಂಟೋ, ಬಶೀರ್ ಅಹ್ಮದ್, ಕವಿತಾ, ಅಪ್ಪಿಲತಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಏಕ ಟೆಂಡರ್‌ಗೆ ಮನಪಾದಲ್ಲೇ ಮಂಜೂರಾತಿಗೆ ಮನವಿ
ಪಾಲಿಕೆ ವತಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಏಕ ಟೆಂಡರ್‌ಗೆ ಮಂಜೂರಾತಿಯನ್ನು ಈವರೆಗೆ ಜಿಲ್ಲಾಧಿಕಾರಿ ನೀಡುತ್ತಿದ್ದು, ಇನ್ನು ಮುಂದೆ ಮನಪಾದಲ್ಲೇ ಮಂಜೂರಾತಿ ನೀಡಲು ಆದೇಶಿಸುವಂತೆ ಸಚಿವರನ್ನು ಕೋರಲಾಗಿದೆ. ಒಂದೆರಡು ದಿನಗಳಲ್ಲಿ ಸೂಕ್ತ ಆದೇಶ ನೀಡುವ ಭರವಸೆ ಇದೆ ಎಂದು ಮೇಯರ್ ಹರಿನಾಥ್ ತಿಳಿಸಿದರು.
ಪುರಭವನದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಊಟದ ಸಭಾಂಗಣ!
ನಗರದ ಪುರಭವನದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಊಟದ ಸಭಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕ್ಕೆ ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಿಸಲಾಗುವುದು. ಪುರಭವನದ ಹಿಂಬದಿಯಲ್ಲೇ ಅತ್ಯಾಧುನಿಕ ಶೈಲಿಯಲ್ಲಿ ಊಟದ ಸಭಾಂಗಣ ನಿರ್ಮಾಣಗೊಳ್ಳಲಿದೆ ಎಂದು ಮೇಯರ್ ತಿಳಿಸಿದರು.







