ರಾಜ್ಯಸಭೆಗೆ ಜೂ.11ರಂದು ಚುನಾವಣೆ: ಜೆಡಿಎಸ್‌ನೊಳಗೆ ಆತಂಕ

ಬೆಂಗಳೂರು, ಜೂ. 10: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಳೆ(ಜೂ.11) ಬೆಳಗ್ಗೆ 9ರಿಂದ ಸಂಜೆ 4ಗಂಟೆಯ ವರೆಗೂ ವಿಧಾನಸೌಧದ ಮೊದಲನೆ ಮಹಡಿಯಲ್ಲಿನ ಕೊಠಡಿ ಸಂಖ್ಯೆ-106ರಲ್ಲಿ ಮತದಾನಕ್ಕೆ ವ್ಯವಸ್ಥೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಮೂರ್ತಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಸ್ಕರ್ ಫೆರ್ನಾಂಡಿಸ್, ಜಯರಾಂ ರಮೇಶ್, ರಾಮಮೂರ್ತಿ, ಬಿಜೆಪಿಯ ನಿರ್ಮಲಾ ಸೀತಾರಾಮನ್ ಹಾಗೂ ಜೆಡಿಎಸ್‌ನ ಬಿ. ಎಂ.ಫಾರೂಕ್ ಸ್ಪರ್ಧಿಸಿದ್ದಾರೆ. ನಾಮ ನಿರ್ದೇಶಿತ ಸದಸ್ಯರನ್ನು ಹೊರತುಪಡಿಸಿ ಜನರಿಂದ ಆಯ್ಕೆಯಾದ 224 ಮಂದಿ ಶಾಸಕರು ಮತ ಚಲಾಯಿಸಲಿದ್ದಾರೆಂದು ಅವರು ಹೇಳಿದರು.
ವಿಪ್ ಜಾರಿ: ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ತಮ್ಮ ಎಲ್ಲ ಶಾಸಕರಿಗೂ ವಿಪ್ ಜಾರಿ ಮಾಡಲಾಗಿದೆ. ಪ್ರಥಮ ಪ್ರಾಶಸ್ತ್ಯದ ಮತವನ್ನು ಆಯಾ ಪಕ್ಷದ ಅಭ್ಯರ್ಥಿಗಳಿಗೆ ನೀಡಬೇಕೆಂದು ತಾಕೀತು ಮಾಡಲಾಗಿದೆ.
224 ಮಂದಿ ಶಾಸಕರಿಂದ ಚಲಾವಣೆಯಾಗುವ ಪ್ರಾಶಸ್ತ್ಯದ ಮತದ ಆಧಾರದ ಮೇಲೆ ಅಭ್ಯರ್ಥಿಗಳ ಗೆಲುವು ನಿರ್ಧಾರವಾಗಲಿದೆ. ಕಾಂಗ್ರೆಸ್ ಪಕ್ಷದ ಆಸ್ಕರ್ ಫೆರ್ನಾಂಡಿಸ್ ಮತ್ತು ಜಯರಾಂ ರಮೇಶ್, ಬಿಜೆಪಿಯ ನಿರ್ಮಲಾ ಸೀತಾರಾಮನ್ ಗೆಲುವು ಬಹುತೇಕ ನಿಶ್ಚಿತವಾಗಿದೆ.
ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೂರನೆ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು ತೀವ್ರ ರಾಜಕೀಯ ಕುತೂಹಲ ಮೂಡಿಸಿದೆ. ಪಕ್ಷೇತರರು ಹಾಗೂ ಜೆಡಿಎಸ್ ಭಿನ್ನಮತೀಯ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಸೋಲನ್ನು ಅನುಭವಿಸಿದ್ದಾರೆಂದು ಹೇಳಲಾಗುತ್ತಿದೆ.
ಜೆಡಿಎಸ್‌ನ ಭಿನ್ನರ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಝಮೀರ್ ಅಹ್ಮದ್ ಖಾನ್, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್ ಅನ್ಸಾರಿ, ಚಲುವರಾಯಸ್ವಾಮಿ ಸೇರಿದಂತೆ ಆರೇಳು ಮಂದಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರೆ ಜೆಡಿಎಸ್‌ಗೆ ಮೇಲ್ಮನೆ ಚುನಾವಣೆಯಲ್ಲಿ ಆದಂತೆ ರಾಜ್ಯಸಭೆ ಚುನಾವಣೆಯಲ್ಲಿಯೂ ಮುಖಭಂಗ ನಿಶ್ಚಿತ ಎನ್ನಲಾಗುತ್ತಿದೆ.
ನಾಳೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೂ ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಸಂಜೆ 5ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಆ ಬಳಿಕ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿದ್ದು, ರಾಜ್ಯಸಭೆ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಮತದಾರರು ಕಾಂಗ್ರೆಸ್-123, ಬಿಜೆಪಿ-44, ಜೆಡಿಎಸ್-40, ಬಿಎಸ್ಸಾರ್ ಕಾಂಗ್ರೆಸ್-3, ಕೆಜೆಪಿ-2, ಸರ್ವೋದಯ ಕರ್ನಾಟಕ ಪಕ್ಷ-1, ಕರ್ನಾಟಕ ಮಕ್ಕಳ ಪಕ್ಷ-1, ಪಕ್ಷೇತರರು-9, ಸ್ಪೀಕರ್-1 ಸೇರಿ ಒಟ್ಟು 225 ಮಂದಿ (ಶಾಸಕರು) ಮತದಾರರು.





