ಪುತ್ತೂರು: ಆವರಣಗೋಡೆ ಕುಸಿದು ಮನೆಗೆ ಹಾನಿ

ಪುತ್ತೂರು, ಜೂ.10: ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಆವರಣಗೋಡೆ ಕುಸಿದು ಪಕ್ಕದ ಮನೆಯ ಮೇಲೆ ಬಿದ್ದು ಹಾನಿಯಾದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಕೊಯಿಲತ್ತಡ್ಕ ಎಂಬಲ್ಲಿ ಶುಕ್ರವಾರ ನಡೆದಿದೆ.
ಕೊಯಿಲತ್ತಡ್ಕ ಜನತಾ ಕಾಲನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಆವರಣಗೋಡೆ ಪಕ್ಕದ ಮಯ್ಯದ್ದಿ ಎಂಬವರ ಮನೆಗೆ ಕುಸಿದು ಬಿದ್ದಿದೆ.
ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಘಟನೆಯ ವೇಳೆ ಮಯ್ಯದಿ ಹಾಗೂ ಅವರ ಪತ್ನಿ ಮನೆಯೊಳಗಿದ್ದರು. ಶಬ್ದ ಕೇಳಿ ಮನೆಯ ಹೊರಗೆ ಓಡಿ ಬಂದ ಕಾರಣ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಮಯ್ಯದಿ ಅವರ ಮನೆ ಸಂಪೂರ್ಣ ಹಾನಿಗೊಳಗಾಗಿದ್ದು ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ.
ಕಳೆದ ವರ್ಷ ಇದೇ ಮನೆಗೆ ಇನ್ನೊಂದು ಮನೆಯ ಆವರಣಗೋಡೆ ಕುಸಿದು ಬಿದ್ದು ಭಾಗಶಃ ಹಾನಿಗೊಳಗಾಗಿತ್ತು.
Next Story





