ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್‌ನಿಂದ ಪುಸ್ತಕ, ರಮಝಾನ್ ಕಿಟ್ ವಿತರಣೆ

ಮಂಗಳೂರು,ಜೂ.10: ಪ್ರತಿಯೊಬ್ಬ ಮನುಷ್ಯನಿಗೆ ಶಿಕ್ಷಣವು ಅತ್ಯವಶ್ಯವಾಗಿದ್ದು, ಅದರಲ್ಲೂ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸುತ್ತಿರುವ ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್‌ನ ಕಾರ್ಯ ಶ್ಲಾಘನೀಯವಾದುದು ಎಂದು ಬಂದರ್ ಸರ್ಕಲ್ ಇನ್ಸ್‌ಪೆಕ್ಟರ್ ಶಾಂತಾರಾಂ ಕುಂದರ್ ಅಭಿಪ್ರಾಯಪಟ್ಟರು.
ಅವರು ಬಂದರ್‌ನ ಬೀಬಿ ಅಲಾಬಿ ರಸ್ತೆಯ ಕಚೇರಿಯಲ್ಲಿ ನಡೆದ ಸೋಶಿಯಲ್ ವೆಲ್ಫೇರ್ ಅಸೋಶಿಯೇಶನ್‌ನ 6ನೆ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಬಡವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರಮಝಾನ್ ಕಿಟ್ ಹಾಗೂ ನಮಾಜ್ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕ್ಷರ ಸಂತ ಹರೇಕಳ ಹಾಜಬ್ಬ, ರಿಯಾಜ್ ಹರೇಕಳ ಅವರ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಉದ್ಯಮಿಗಳು ಸಹಕಾರ ನೀಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಶರೀಫ್, ಸಾಮಾಜಿಕ ಕಾರ್ಯಕರ್ತ ಇ.ಕೆ.ಕಣ್ಣೂರುರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಎ. ಮುಹಮ್ಮದಾಲಿ ಕಮ್ಮರಡಿ, ಎಸ್‌ಡಿಡಿಐಯ ಜಲೀಲ್ ಕೃಷ್ಣಾಪುರ, ಕರವೆ ಮುಖಂಡ ಮುಹಿಶಿರ್ ಶಾಮಾಣಿಕೆ, ಶಬೀರ್ ಮಾಚಾರ್, ಮುಸ್ಲಿಂ ಲೀಗ್ ಮುಖಂಡ ಎಚ್. ಇಸ್ಮಾಯೀಲ್, ಅಲ್ ಅರಿಫ್ ಉದ್ಯಮಿ ಹಾಜಿ ಹಸನ್ ಕುಂದಾಪುರ, ಜಾಫರ್ ಬಂಟ್ವಾಳ ಉಪಸ್ಥಿತರಿದ್ದರು.
ಶರೀಫ್ ಕೊಲ ಸ್ವಾಗತಿಸಿದರು, ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.







