ಅರಿವು ಯೋಜನೆಯಡಿ 10 ಕೋಟಿ ರೂ. ಆವರ್ತನಿಧಿ: ಡಾ.ಖಮರುಲ್ ಇಸ್ಲಾಮ್
ಕೆಎಂಡಿಸಿ-ರಾಜ್ಯ ಪರೀಕ್ಷಾ ಪ್ರಾಧಿಕಾರದೊಂದಿಗೆ ಒಪ್ಪಂದ

ಬೆಂಗಳೂರು, ಜೂ.10: ರಾಜ್ಯದ ಮತೀಯ ಅಲ್ಪಸಂಖ್ಯಾತ ಸಮುದಾಯಗಳ (ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿಗಳು) ಬಡ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಅರಿವು(ವಿದ್ಯಾಭ್ಯಾಸ) ಯೋಜನೆಯಡಿ 10 ಕೋಟಿ ರೂ.ಗಳ ಆವರ್ತ ನಿಧಿಯನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಚೆಕ್ ಮೂಲಕ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಾ.ಖಮರುಲ್ ಇಸ್ಲಾಮ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ಸಚಿವರ ಕೊಠಡಿ ಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ)ದ ವತಿಯಿಂದ ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಚೆಕ್ ಮೂಲಕ 2016-17ನೆ ಸಾಲಿಗೆ 10 ಕೋಟಿ ರೂ.ಆವರ್ತ ನಿಧಿ ಹಸ್ತಾಂತರಿಸುವ ಒಡಂಬಡಿ ಕೆಗೆ ಸಹಿ ಹಾಕಿದ ಬಳಿಕ ಅವರು ಮಾತನಾಡಿದರು.
ರಾಜ್ಯ ಸರಕಾರವು ನಡೆಸುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ವೃತ್ತಿಪರ ಶಿಕ್ಷಣಕ್ಕಾಗಿ ರ್ಯಾಂಕಿಂಗ್ ಪಡೆದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾ ರ್ಥಿ ಗಳಿಗೆ ಕೆಎಂಡಿಸಿ ನಿಯಮಾವಳಿಯನ್ವಯ ‘ಪೂರ್ವ ಮಂಜೂರಾತಿ ಶೈಕ್ಷಣಿಕ ಸಾಲ’ವನ್ನು ಮಂಜೂರು ಮಾಡ ಲಾಗುತ್ತಿದೆ ಎಂದು ಖಮರುಲ್ ಇಸ್ಲಾಮ್ ಹೇಳಿದರು.
ಇದರಿಂದಾಗಿ, ಸಿಇಟಿ ಮೂಲಕ ವೃತ್ತಿಪರ ಶಿಕ್ಷಣಕ್ಕಾಗಿ ಸೀಟ್ ಆಯ್ಕೆ ಮಾಡಿಕೊಂಡು, ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ, ಅಂತಹ ವಿದ್ಯಾರ್ಥಿಗಳು ಬೋಧನಾ ಶುಲ್ಕವನ್ನು ಪಾವತಿಸಲು ಯಾವುದೇ ಡಿಡಿಯನ್ನು ಸಲ್ಲಿಸಬೇಕಾಗಿಲ್ಲ ಮತ್ತು ನೇರ ಪ್ರವೇಶ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಸಿಇಟಿ ಮೂಲಕ ರ್ಯಾಂಕಿಂಗ್ ಪಡೆದು ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಶಿಕ್ಷಣ ಪಡೆಯಬಯಸುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು, ನಿಗದಿತ ಶಿಕ್ಷಣ ಶುಲ್ಕವನ್ನು ಪಾವತಿಸಲು ಅಶಕ್ತರಾದ ಕಾರಣದಿಂದಾಗಿ ವೃತ್ತಿಪರ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರಕಾರವು ಇಂತಹ ಪ್ರಯತ್ನವನ್ನು ಮಾಡಿದೆ ಎಂದರು.
ಅರಿವು ಯೋಜನೆಯಡಿ 2014-15ನೆ ಸಾಲಿನಲ್ಲಿ ನಿಗಮವು ರಾಜ್ಯ ಪರೀಕ್ಷಾ ಪ್ರಾಧಿಕಾರದ ಮೂಲಕ 1,859 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ಶಿಕ್ಷಣಕ್ಕಾಗಿ 5.13 ಕೋಟಿ ರೂ.ಮತ್ತು ಪಿಜಿಸಿಇಟಿ ಮೂಲಕ ಸ್ನಾತಕೋತ್ತರ (ಎಂ.ಟೆಕ್) ಪದವಿ ಶಿಕ್ಷಣಕ್ಕಾಗಿ 139 ವಿದ್ಯಾರ್ಥಿಗಳಿಗೆ 79.50 ಲಕ್ಷ ರೂ.ಗಳ ಸಾಲ ಸೌಲಭ್ಯವನ್ನು ಕಲ್ಪಿಸಿದೆ. ಹಾಗೆಯೇ 2015-16ನೆ ಸಾಲಿನಲ್ಲಿ 2,841 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ಶಿಕ್ಷಣಕ್ಕಾಗಿ 11.24 ಕೋಟಿ ರೂ.ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ
-ಡಾ.ಖಮರುಲ್ ಇಸ್ಲಾಮ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ







