ಸರಕಾರ ಕಾಲಮಿತಿಯಲ್ಲಿ ತೀರ್ಮಾನ: ದಿಗ್ವಿಜಯ್‌ಸಿಂಗ್
ಅನುಪಮಾ ಶೆಣೈ ರಾಜೀನಾಮೆ ಪ್ರಕರಣ

ಬೆಂಗಳೂರು, ಜೂ.10: ಕೂಡ್ಲಿಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ರಾಜೀನಾಮೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕಾಲಮಿತಿಯಲ್ಲಿ ತೀರ್ಮಾನ ಕೈಗೊಂಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಹಾಗೂ ಅದರ ಸಚಿವರು ಅಧಿಕಾರಿ ಗಳೊಂದಿಗೆ ಯಾವಾಗಲೂ ಅತ್ಯಂತ ಗೌರವಯುತ ವಾಗಿ ನಡೆದುಕೊಳ್ಳುತ್ತಾರೆ. ಅನುಪಮಾ ಶೆಣೈ ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಈವರೆಗೆ ಬಹಿರಂಗಪಡಿಸಿಲ್ಲ ಎಂದರು.
ರಾಜ್ಯ ಸರಕಾರವು ಪದೇ ಪದೇ ಅನುಪಮಾ ಶೆಣೈಗೆ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿತ್ತು. ಆದರೆ, ಅವರು ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿಲ್ಲ. ಸರಕಾರ ಇಂತಹ ವಿಷಯಗಳ ಕುರಿತು ಕಾಲಮಿತಿಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕು. ಈ ವಿಚಾರದಲ್ಲೂ ಅದೇ ಆಗಿದೆ ಎನ್ನುವ ಮೂಲಕ ಅನುಪಮಾ ಶೆಣೈ ರಾಜೀನಾಮೆ ಅಂಗೀಕಾರವನ್ನು ಅವರು ಸಮರ್ಥಿಸಿಕೊಂಡರು.
ಯಾವ ಅನುಪಮಾ ಶೆಣೈ?: ಪರಮೇಶ್ವರ್ ನಾಯ್ಕ್ ಪ್ರಶ್ನೆ
ಬೆಂಗಳೂರು, ಜೂ.10: ನನಗೆ ಯಾವ ಅನುಪಮಾ ಶೆಣೈಯೂ ಗೊತ್ತಿಲ್ಲ. ಅದು ಮುಗಿದ ಅಧ್ಯಾಯ ಎಂದು ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಇಂದು ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ಅನುಪಮಾ ಶೆಣೈಯೂ ಗೊತ್ತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ 8-10 ಮಂದಿ ಡಿವೈಎಸ್ಪಿಗಳಿದ್ದಾರೆ. ಯಾವ ಅನುಪಮಾ ಶೆಣೈ ಎಂದು ಮಾಧ್ಯಮವರಿಗೆ ಪ್ರಶ್ನಿಸಿದರು.
ಅನುಪಮಾ ಅವರು ನೀಡಿರುವ ರಾಜೀನಾಮೆಯನ್ನು ರಾಜ್ಯ ಸರಕಾರ ಅಂಗೀಕರಿಸಿದೆ. ಈಗ ಅವರು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ರಾಜೀ ನಾಮೆ ನೀಡಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ಒತ್ತಡವನ್ನೂ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.







