ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ: ಶಾಸಕ ನಡಹಳ್ಳಿ

ಬೆಂಗಳೂರು, ಜೂ. 10: ನಾನೀಗ ಕಾಂಗ್ರೆಸ್ ಪಕ್ಷದ ಲ್ಲಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವೆ ಎಂದು ದೇವರ ಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮೇಲ್ಮನೆ ಚುನಾವ ಣೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೀಗ ಕಾಂಗ್ರೆಸ್ ಪಕ್ಷದಲ್ಲಿದ್ದು, ನಮ್ಮ ಪಕ್ಷದ ನಾಯಕರ ಆದೇಶವನ್ನು ಪಾಲಿಸುತ್ತೇನೆ. ಇನ್ನು ಎರಡು ವರ್ಷ ಇದೇ ಪಕ್ಷದಲ್ಲಿ ಜನಪರವಾದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇನೆ. ಆದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತೇನೆಂದು ಹೇಳಿ ಅಚ್ಚರಿ ಮೂಡಿಸಿದರು.
60 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ವಾಗುತ್ತಿದೆ. ಅಲ್ಲಿನ ಜನರು ನೋವಿನಲ್ಲಿದ್ದು, ಆ ಭಾಗದ ಜನರ ಧ್ವನಿಗೆ ಸ್ಪಂದಿಸುವವರೆಗೂ ನನ್ನ ಸಾರ್ವಜನಿಕ ಜೀವನದುದ್ದಕ್ಕೂ ಹೋರಾಟ ನಡೆಸುತ್ತೇನೆ ಎಂದ ಅವರು, ಮುಂದಿನ ದಿನಗಳಲ್ಲಿಯೂ ನನ್ನ ಚಳವಳಿ ಮುಂದುವರಿಸುವೆ ಎಂದರು.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ,ಅಭ್ಯರ್ಥಿಗಳಾದ ಆಸ್ಕ ಫೆರ್ನಾಂಡಿಸ್, ಜಯರಾಂ ರಮೇಶ್ ನನ್ನನ್ನು ಭೇಟಿ ಮಾಡಿದ್ದು, ಮತ ನೀಡುವಂತೆ ಮನವಿ ಮಾಡಿದ್ದಾರೆ. ನಾನು ಎಂದೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಿಲ್ಲ. ಆದರೂ ನನ್ನನು ಅಮಾನತು ಮಾಡಿರುವುದೇಕೆಂದು ಗೊತ್ತಿಲ್ಲ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜೊತೆ ತನ್ನ ಗೆಳೆತನ ಹೊಸದೇನಲ್ಲ. ನಮ್ಮಿಬ್ಬರ ಮಧ್ಯ ಉತ್ತಮ ಬಾಂಧವ್ಯವಿದೆ. ಪಕ್ಷಗಳು ಬೇರೆಯಾಗಿವೆ ಎಂಬ ಕಾರಣಕ್ಕೆ ಸಂಬಂಧಗಳು ಹೋಗುವುದಿಲ್ಲ ಎಂದು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.





