ಶಿವಮೊಗ್ಗ: ಮುಂಗಾರು ಮಳೆ
ಶಿವಮೊಗ್ಗ, ಜೂ. 10: ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಶುಕ್ರವಾರ ಕೂಡ ಉತ್ತಮ ಮಳೆಯಾಯಿತು. ಜಲಾನಯನ ಪ್ರದೇಶಗಳಲ್ಲಾಗುತ್ತಿರುವ ವರ್ಷಧಾರೆಯಿಂದ ಪ್ರಮುಖ ಜಲಾಶಯಗಳಿಗೆ ನೀರು ಹರಿದು ಬರಲಾರಂಭಿಸಿದೆ. ಹಲವೆಡೆ ಹದ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿ ಅಂಶದ ಪ್ರಕಾರ, ಶುಕ್ರವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಸೊರಬ ತಾಲೂಕು ಕೇಂದ್ರದಲ್ಲಿ ಅತ್ಯಧಿಕ 41 ಮಿ.ಮೀ. ಮಳೆಯಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ 9.40 ಮಿ.ಮೀ., ಭದ್ರಾವತಿ 3.40 ಮಿ.ಮೀ., ತೀರ್ಥಹಳ್ಳಿ 13.40 ಮಿ.ಮೀ., ಸಾಗರ 2 ಮಿ.ಮೀ., ಶಿಕಾರಿಪುರದಲ್ಲಿ 0.20 ಮಿ.ಮೀ. ಹಾಗೂ ಹೊಸನಗರ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ 24.20 ಮಿ.ಮೀ. ಮಳೆಯಾಗಿದೆ. ಶುಕ್ರವಾರ ಬೆಳಗ್ಗೆಯ ಮಾಹಿತಿಯಂತೆ ಭದ್ರಾ ಜಲಾಶಯದ ಒಳಹರಿವು 749 ಕ್ಯೂಸೆಕ್‌ಗೆ ಏರಿಕೆಯಾಗಿದೆ. 286 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಡ್ಯಾಂ ವ್ಯಾಪ್ತಿಯಲ್ಲಿ 5.80 ಮಿ.ಮೀ. ವರ್ಷಧಾರೆಯಾಗಿದೆ. ನೀರಿನ ಮಟ್ಟ ಸದ್ಯ 112.80 ಅಡಿ ಇದ್ದು, ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದೆ.
ತುಂಗಾ ಜಲಾಶಯಕ್ಕೆ 60 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. 584.71 (ಗರಿಷ್ಠ ಮಟ್ಟ : 588.24) ಅಡಿ ನೀರು ಸಂಗ್ರಹವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಇಲ್ಲವಾಗಿದ್ದು, ವಿದ್ಯುತ್ ಉತ್ಪಾದನೆಗಾಗಿ ಜಲಾಶಯದಿಂದ 1987 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 13.40 ಮಿ.ಮೀ. ಮಳೆಯಾಗಿದೆ. ಡ್ಯಾಂನಲ್ಲಿ 1756.55 (ಗರಿಷ್ಠ ಮಟ್ಟ: 1819) ಅಡಿ ನೀರು ಸಂಗ್ರಹವಾಗಿದೆ. ಶಿವಮೊಗ್ಗ ವರದಿ: ನಗರದಲ್ಲಿ ಬೆಳಗ್ಗೆಯಿಂದಲೇ ತುಂತುರು ಮಳೆ ಬೀಳಲಾರಂಭಿಸಿದ್ದು, ಒಂದೆರೆಡು ಬಾರಿ ಧಾರಾಕಾರ ಮಳೆಯಾಯಿತು. ಮಧ್ಯಾಹ್ನದ ವೇಳೆ ಸೂರ್ಯ ಕಾಣಿಸಿಕೊಂಡರೂ ಮತ್ತೆ ಕಪ್ಪುಮೋಡಗಳು ಆಕಾಶದಲ್ಲಿ ದಟ್ಟೈಸಿದ್ದವು. ನಗರದ ಹಲವೆಡೆ ಚರಂಡಿಯಲ್ಲಿ ಕಸಕಡ್ಡಿ ತುಂಬಿಕೊಂಡು ಸರಾಗವಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ಹೊಲದತ್ತ ರೈತ: ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹೊಲಗದ್ದೆಗಳತ್ತ ಚಿತ್ತ ಹರಿಸಿದ್ದಾರೆ. ಬಿತ್ತನೆ, ನಾಟಿಗೆ ಜಮೀನು ಸಿದ್ಧಪಡಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಕೆಲವೆಡೆ ಹದ ಮಳೆಯಾಗಿರುವುದರಿಂದ ರೈತರು ಭತ್ತದ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ. ಕೃಷಿ ಇಲಾಖೆ ಕೂಡ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಂಡಿದೆ.







