ವೀಣಾಅಚ್ಚಯ್ಯ ಎಂಎಲ್‌ಸಿಯಾಗಿ ಆಯೆ್ಕ
ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ

ಮಡಿಕೇರಿ, ಜೂ. 10: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ನ ವೀಣಾಅಚ್ಚಯ್ಯ ಅವರು ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಇವರ ಗೆಲುವಿಗೆ 29 ಮತಗಳ ಅಗತ್ಯವಿತ್ತಾದರೂ 31 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗು ಬೀರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಟಿ.ಪಿ.ರಮೇಶ್, ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಜಿಲ್ಲಾ ವಕ್ತಾರ ಮಂಜುನಾಥ್ ಕುಮಾರ್, ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರೆಭಾಷಾ ಸಾಹಿತ್ಯ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್, ವಕ್ಫ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಪ್ರಮುಖರಾದ ಲೋಕೇಶ್ ಕುಮಾರ್, ವಿ.ಎ. ವೆಂಕಟೇಶ್, ಬಿ.ಎನ್. ಪ್ರಕಾಶ್, ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಮತ್ತಿತರರು ಹಾಜರಿದ್ದು ವೀಣಾ ಅಚ್ಚಯ್ಯ ಅವರ ಗೆಲುವನ್ನು ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ವೀಣಾ ಅಚ್ಚಯ್ಯ, ಕೊಡಗಿನ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ಭರವಸೆ ನೀಡಿದರು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು, ಸಂಘ ಸಂಸ್ಥೆಗಳ ಪ್ರಮುಖರನ್ನು ಒಗ್ಗೂಡಿಸಿಕೊಂಡು ಸೂಕ್ತ ಸಲಹೆ ಸೂಚನೆಗಳ ಆಧಾರದಲ್ಲಿ ಜಿಲ್ಲೆಯ ಅಭ್ಯುದಯಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು. ಶಾಂತಿ, ಸೌಹಾರ್ದತೆಗೆ ಆದ್ಯತೆ ನೀಡುವುದಾಗಿ ಹೇಳಿದರು.
ತಮ್ಮ ಗೆಲುವಿಗಾಗಿ ಸಹಕರಿಸಿದ ಪಕ್ಷದ ರಾಜ್ಯ ಹಾಗೂ ಜಿಲ್ಲೆಯ ನಾಯಕರುಗಳಿಗೆ ಇದೇ ಸಂದರ್ಭ ವೀಣಾಅಚ್ಚಯ್ಯ ಕೃತಜ್ಞತೆ ಸಲ್ಲಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಈ ಹಿಂದೆ ಶ್ರಮಿಸಿದ್ದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಜಿಪಂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದವರು:
ಕಾಂಗ್ರೆಸ್‌ನ ನಾಲ್ವರು ಅಭ್ಯರ್ಥಿಗಳು, ಬಿಜೆಪಿಯ ಇಬ್ಬರು, ಜೆಡಿಎಸ್‌ನ ಒಬ್ಬರಿಗೆ ಗೆಲುವು ಸಿಕ್ಕಿದೆ. ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ್, ವೀಣಾ ಅಚ್ಚಯ್ಯ, ರಿಝ್ವಾನ್ ಅರ್ಷದ್ ಆಯ್ಕೆ ಆಗಿದ್ದಾರೆ. ಬಿಜೆಪಿಯ ವಿ. ಸೋಮಣ್ಣ, ಎರಡನೆಯ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್‌ನ ಕೆ.ವಿ ನಾರಾಯಣ ಸ್ವಾಮಿಗೆ ಗೆಲುವು ಸಿಕ್ಕಿದೆ.







