ಬಾಕಿ ಇರುವ ವೇತನ ಮರುಪಾವತಿಸಿ
ಜಿಲ್ಲಾಡಳಿತಕ್ಕೆ ಗುತ್ತಿಗೆ ಕಾರ್ಮಿಕರ ಮನವಿ

ಕಾರವಾರ, ಜೂ. 10: ಮುಂಡಗೋಡ ಪಟ್ಟಣ ಪಂಚಾಯತ್‌ನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ತಮಗೆ ಬಾಕಿ ಇರುವ ವೇತನ ಮರುಪಾವತಿಸಬೇಕು ಹಾಗೂ ತಮ್ಮ ಕೆಲಸವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಗುತ್ತಿಗೆ ಕಾರ್ಮಿಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪಪಂ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದವರಿಗೆ ನೀಡಬೇಕಾಗಿದ್ದ ವೇತನ ನೀಡಿಲ್ಲ. ಅಲ್ಲದೇ ಕೆಲಸದಿಂದಲೂ ಕೈಬಿಡಲಾಗಿದೆ. ತಕ್ಷಣ ಬಾಕಿ ಇರುವ ವೇತನವನ್ನು ಅಧಿಕಾರಿಗಳು ಬಿಡುಗಡೆ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹಿಂದೆ ಅನೇಕ ಬಾರಿ ಮುಖ್ಯ ಮಂತ್ರಿಗಳಿಗೆ, ಶಾಸಕರಿಗೆ ಪತ್ರ ಬರೆಯಲಾಗಿತ್ತು. ತಮ್ಮ ಮನವಿಗೆ ಸ್ಪಂದಿಸಿ ಮುಖ್ಯಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಪತ್ರ ಕಳುಹಿಸಿದ್ದರು. ಆದರೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ವೇತನ ಪಾವತಿ ಮಾಡಿಲ್ಲ. ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ 12 ಗುತ್ತಿಗೆ ಕಾರ್ಮಿಕರಿಗೆ ಬಾಕಿ ಇರುವ 3.96 ಲಕ್ಷ ರೂ. ಸಂದಾಯ ಮಾಡಿ ಕೆಲಸಕ್ಕೆ ಪುನಃ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನವಚೇತನ ನಿರಂತರ ಉಳಿತಾಯ ಮತ್ತು ಸಾಲದ ಸಂಘದ ಶೇಖವ್ವ ಅಗಸರ, ಗಂಗವ್ವ, ಲಕ್ಷ್ಮಿ, ಸುಶಿಲವ್ವ, ಶಾರದಾ, ಅಂಜಲಿ ಉಪಸ್ಥಿತರಿದ್ದರು.







