ಮುಳುಗುತ್ತಿದ್ದ ವಿದೇಶಿ ನಾವಿಕರ ರಕ್ಷಣೆ
‘ಎಂವಿ ಇನ್ಫಿನಿಟಿ’ ಹಡಗು ಸುರಕ್ಷಿತವಾಗಿ ಕಾರವಾರ ಬಂದರಿಗೆ

ಕಾರವಾರ, ಜೂ. 10: ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿ ವಿದೇಶಿ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾದಳ ಸಿಬ್ಬಂದಿ ಗುರುವಾರ ರಾತ್ರಿ ರಕ್ಷಣೆ ಮಾಡಿದ್ದು, ನೌಕಾಸೇನೆ ಮತ್ತು ಕೋಸ್ಟ್‌ಗಾರ್ಡ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವ ‘ಎಂ.ವಿ. ಇನ್ಫಿನಿಟಿ’ ವಾಣಿಜ್ಯ ಹಡಗನ್ನು ಶುಕ್ರವಾರ ಸುರಕ್ಷಿತವಾಗಿ ಕಾರವಾರ ಬಂದರಿಗೆ ತರಲಾಗಿದೆ.
‘ಪ್ರೈಮ್ ಟ್ಯಾಂಕರ್’ ಕಂಪೆನಿಗೆ ಸೇರಿದ ಈ ಹಡಗು ದುಬೈನಿಂದ 1,750 ಟನ್ ಡಾಂಬರು ತುಂಬಿಕೊಂಡು ಹೊರಟಿತ್ತು. ಮಧ್ಯದಲ್ಲಿ ಇಂಜಿನ್ ಹಾಳಾದ ಪರಿಣಾಮ ಗುಜರಾತ್‌ನ ಕಾಂಡ್ಲ ಬಂದರಿಗೆ ತೆರಳಿ ದುರಸ್ತಿ ಮಾಡಿಕೊಂಡು ಅಲ್ಲಿಂದ ಹೊರಟಿತ್ತು ಎಂದು ತಿಳಿದು ಬಂದಿದೆ.
ಗೋವಾ ಕಡಲತೀರದಿಂದ ಸುಮಾರು 20ರಿಂದ 30 ನಾಟಿಕಲ್ ಮೈಲಿ ದೂರದಲ್ಲಿದ್ದಾಗ ಈ ಹಡಗಿನ ಬಲಭಾಗದ ಕವಚದಲ್ಲಿ ಬಿರುಕು ಕಾಣಿಸಿಕೊಂಡು ಪುನಃ ಹಡಗು ತೊಂದರೆಗೆ ಸಿಲುಕಿತ್ತು. ಬಿರುಕಿನ ಮೂಲಕ ನೀರು ಒಳಹೋಗಲು ಆರಂಭಿಸಿದಾಗ ಸುಮಾರು 7ಡಿಗ್ರಿಯಷ್ಟು ಬಲಕ್ಕೆ ವಾಲಿತ್ತು. ಪರಿಸ್ಥಿತಿಯ ಸೂಕ್ಷ್ಮತೆ ಅರಿತು ನೀರು ಒಳ ಬರದಂತೆ ತಡೆಯಲು ಹಡಗಿನ ಸಿಬ್ಬಂದಿ ಹಲವು ಪ್ರಯತ್ನ ನಡೆಸಿದರೂ ಸಫಲರಾಗಿರಲಿಲ್ಲ. ನಂತರ ನೌಕಾಸೇನೆಯ ಬಳಿ ಸಹಾಯ ಕೇಳಲಾಯಿತು. ‘ಎನ್‌ಎಸ್ ತ್ರಿಕಂದ್’ ನೌಕೆ ಜೊತೆಗೆ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ರಕ್ಷಣಾ ಕಾರ್ಯಾಚರಣೆಗೆ ಬಂದಿದ್ದರು. ಪಂಪ್ ಮೂಲಕ ನೀರನ್ನು ಹೊರ ಹಾಕಲಾಯಿತು. ಕೋಸ್ಟ್‌ಗಾರ್ಡ್‌ನ ‘ಅಮಲ್’ ಮತ್ತು ‘ಶೂರ್’ ನೌಕೆಗಳು ಹಾಗೂ ಒಂದು ಟಗ್ ದೋಣಿ ಕೂಡ ರಕ್ಷಣೆಗೆ ಸಹಕರಿಸಿದೆ ಎಂದು ಹಡಗಿನ ಕ್ಯಾಪ್ಟನ್ ಅಭಿಲಾಷ್ ಸುರೇಂದ್ರನ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.







