ನ್ಯಾಯದ ದಾರಿ ಬಲು ಕಠಿಣ

2002ರ ಫೆಬ್ರವರಿ 28ರಂದು ಅಹ್ಮದಾಬಾದ್ ನಗರದ ಹೃದಯಭಾಗದಲ್ಲಿ 69 ಮಂದಿಯ ಬರ್ಬರ ಹತ್ಯೆಗೆ ಸಂಬಂಧಿಸಿದ ಗುಲ್ಬರ್ಗ್ ಸೊಸೈಟಿ ಪ್ರಕರಣದಲ್ಲಿ 24 ಮಂದಿಯ ದೋಷಿಗಳಿಗೆ ನೀಡಲಾದ ಶಿಕ್ಷೆಗಳ ಪ್ರಮಾಣದ ಕುರಿತ ವಾದಗಳ ಆಲಿಕೆಯನ್ನು ಅಹ್ಮದಾಬಾದ್ ಸೆಶನ್ಸ್ ನ್ಯಾಯಾಧೀಶರು ಇತ್ತೀಚೆಗಷ್ಟೇ ಮುಗಿಸಿದ್ದಾರೆ. ಭಾರತೀಯ ದಂಡಸಂಹಿತೆಯ 302ನೆ ಸೆಕ್ಷನ್‌ನ ಅಡಿ ಅಪರಾಧಿಗಳೆಂದು ಸಾಬೀತಾದ 11 ಮಂದಿಗೆ ಮರಣದಂಡನೆಯನ್ನು ನೀಡಲಾಗುವುದೇ ಎಂಬ ಬಗ್ಗೆ ಈಗ ಎಲ್ಲರ ಗಮನಹರಿದಿದೆ. ವಿಶೇಷ ತನಿಖಾ ತಂಡ (ಸಿಟ್)ವು ಅಪರಾಧಿಗಳಿಗೆ ಮರಣದಂಡನೆ ನೀಡಬೇಕೆಂದು ಆಗ್ರಹಿಸಿದೆ. ಆದರೆ ದೋಷಿಗಳ ಅಹವಾಲುಗಳನ್ನು ಆಲಿಸಿದ ಬಳಿಕ ಈ ಬಗ್ಗೆ ನ್ಯಾಯಾಧೀಶರು ತೀರ್ಮಾನ ಕೈಗೊಳ್ಳಲಿರುವರು ಹಾಗೂ ಈ ಹತ್ಯಾಕಾಂಡವು ಅಪರೂಪದಲ್ಲಿ ಅಪರೂಪ ಪ್ರಕರಣಗಳ ಸಾಲಿಗೆ ಸೇರುವುದೇ ಎಂಬುದನ್ನು ನಿರ್ಧರಿಸಲಿರುವರು.
ಗುಜರಾತ್ ಗಲಭೆ ಪ್ರಕರಣಗಳು ಭಾರತದ ಕ್ರಿಮಿನಲ್ ನ್ಯಾಯಾಂಗದ ಇತಿಹಾಸದಲ್ಲೇ ಮಹತ್ವದ ಮೈಲುಗಲ್ಲುಗಳಾಗಿವೆ. ಈ ಪ್ರಕರಣಗಳನ್ನು ಗಂಭೀರವಾಗಿ ಪರಾಮರ್ಶಿಸುವಂತೆ ಆಗ್ರಹಿಸುವ ಎರಡೂ ಮೂಲಭೂತ ವಿಚಾರಗಳಿವೆ. ನ್ಯಾಯಾಂಗದ ಚಕ್ರಗಳು, ಅಂತಿಮ ನಿಲ್ದಾಣವನ್ನು ತಲುಪಲು 14 ವರ್ಷಗಳು ಬೇಕಿತ್ತೇ?, ಮರಣದಂಡನೆಯನ್ನು ವಿಧಿಸುವ ಮೂಲಕ ಅಮಾಯಕ ಸಹ ನಾಗರಿಕರ ಮೇಲೆ ಇಂತಹ ಬರ್ಬರ ಕೃತ್ಯವನ್ನು ಎಸಗಲು ಭವಿಷ್ಯದಲ್ಲಿ ಕ್ರಿಮಿನಲ್‌ಗಳನ್ನು ಹಿಮ್ಮೆಟ್ಟುವಂತೆ ಮಾಡುವುದೇ?, ಯಾವುದೇ ಪ್ರಜಾಪ್ರಭುತ್ವಕ್ಕೂ ಇವೆರಡು ಪ್ರಸ್ತುತವಾಗಿದೆ. ಆದರೆ ಹೆಚ್ಚುತ್ತಿರುವ ಬೀದಿ ಹಿಂಸೆ, ಶೋಷಣೆ, ಭ್ರಷ್ಟಾಚಾರ, ಸೋಮಾರಿತನದ ಕೊನೆಯಿರದ ಕಥೆಗಳಿಂದ ರೋಸಿಹೋಗಿರುವ ಭಾರತದಲ್ಲಿ ಇವು ವಿಶೇಷ ಮಹತ್ವವನ್ನು ಪಡೆದಿವೆ. ಅಪರಾಧದ ಅಂಕಿಅಂಶಗಳು ಸಂಪೂರ್ಣ ಕಥೆಯನ್ನು ಹೇಳಲಾರವು, ಆದರೆ ಜನತೆಯ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಸಫಲವಾಗಿವೆ.
ಎಲ್ಲರಿಗೂ ಪಾಠ
ಗುಜರಾತ್ ಗಲಭೆಯು 2002ರಲ್ಲಿ ನಡೆದಿತ್ತು. ರಾಜ್ಯ ಪೊಲೀಸರು ಸುಮಾರು 100 ಪ್ರಕರಣಗಳ ತನಿಖೆ ನಡೆಸಿದ್ದು, ಅವುಗಳಲ್ಲಿ ಕೆಲವು ಪ್ರಮುಖ ಹಾಗೂ ಇನ್ನು ಕೆಲವು ಕಿರು ಸಣ್ಣ ಆಯಾಮವನ್ನು ಹೊಂದಿವೆ. ಗಲಭೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಗುಜರಾತ್ ಪೊಲೀಸರ ಪಕ್ಷಪಾತದ ನಡವಳಿಕೆಯನ್ನು ವಿರೋಧಪಕ್ಷಗಳು ಹಾಗೂ ಕೆಲವು ಸರಕಾರೇತರ ಸಂಘಟನೆಗಳು ಪ್ರತಿಭಟಿಸಿದ್ದವು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿವೆ. 2008ರಲ್ಲಿ ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡವನ್ನು ನೇಮಿಸಿ, ಗುಜರಾತ್ ಗಲಭೆಯ 9 ಪ್ರಮುಖ ಪ್ರಕರಣಗಳನ್ನು ಅದಕ್ಕೆ ವಹಿಸಿತು. 2008ರ ಉತ್ತರಾರ್ಧದಿಂದ ಮೊದಲ್ಗೊಂಡು, ಸಿಟ್ ನಿಯತಕಾಲಿಕ ಮಧ್ಯಂತರಗಳಲ್ಲಿ ದೋಷಾರೋಪಪಟ್ಟಿಗಳನ್ನು ಸಲ್ಲಿಸಲು ಆರಂಭಿಸಿತ್ತು.
ಈ ಪ್ರಕರಣಗಳ ತನಿಖೆಗೆ ಐದು ವರ್ಷಗಳಿಗೂ ಅಧಿಕ ಸಮಯ ತಗಲಿದೆ. ವಾಸ್ತವಿಕವಾಗಿ ಕೆಲವು ಪ್ರಕರಣಗಳಲ್ಲಿ ಎಂಟು ವರ್ಷಗಳಾಗಿವೆ. ಆ ಮೂಲಕ ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಅತ್ಯಂತ ತ್ವರಿತವಾಗಿ ಹಾಗೂ ದಕ್ಷತೆಯಿಂದ ಮಾಡದೇ ಹೋದಲ್ಲಿ, ನ್ಯಾಯಾಲಯದ ಪ್ರಕ್ರಿಯೆಗಳಿಗೆ ಅಪಾರ ಪ್ರಮಾಣದ ಸಮಯ ವ್ಯಯವಾಗುವುದೆಂಬುದಕ್ಕೆ ಇದು ಸಾಕ್ಷಿಯಾಗಿದೆ. ಪ್ರತಿವಾದಿ ವಕೀಲರ ವಿವಾದಾಸ್ಪದವಾದ ಪಾಟಿ ಸವಾಲು ಹಾಗೂ ನ್ಯಾಯಾಧೀಶರಿಗೆ ಬೆಟ್ಟದಷ್ಟಿರುವ ಕೆಲಸದ ಹೊರೆ, ಇವು ಸಂತ್ರಸ್ತರನ್ನು ನ್ಯಾಯಕ್ಕಾಗಿ ದೀರ್ಘ ಕಾಲ ಕಾಯುವಂತೆ ಮಾಡಿವೆ. ಬಾಕಿಯಿರುವ ಪ್ರಕರಣವೊಂದರಲ್ಲಿ, ಪ್ರತಿವಾದಿ ವಕೀಲರು ತನ್ನ ಪರವಾಗಿ 500ಕ್ಕೂ ಅಧಿಕ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸುವ ಪ್ರಸ್ತಾಪ ಮಾಡಿದ್ದರು. ಪ್ರಾಸಿಕ್ಯೂಶನ್ ತನ್ನ ಹಲವಾರು ಸಾಕ್ಷಿಗಳಿಂದ ಹೇಳಿಕೆಯನ್ನು ಪಡೆದುಕೊಂಡು, ಆನಂತರ ಅವರನ್ನು ಪ್ರತಿವಾದಿ ವಕೀಲರು ಪಾಟಿ ಸವಾಲಿಗೊಳಪಡಿಸಿದ ಬಳಿಕ ಈ ಸಾಕ್ಷಿಗಳನ್ನು ಹಾಜರುಪಡಿಸಲಾಗಿತ್ತು. ಇದು ಖಂಡನೀಯವಾದಂತಹ ಕಾಲಹರಣ ತಂತ್ರವಾಗಿದ್ದು, ಈ ಪ್ರವೃತ್ತಿಯು ದೇಶಾದ್ಯಂತ ಬಹುತೇಕ ಪ್ರಕರಣಗಳಲ್ಲಿ ಕಂಡುಬರುತ್ತಿದೆ. ನ್ಯಾಯಾಲಯಗಳ ಹಲವಾರು ನಿರ್ವಹಣಾ ಅಧಿಕಾರಿಗಳು ಈ ಷಡ್ಯಂತ್ರಕ್ಕೆ ಆಸ್ಪದ ನೀಡುವ ಹಾಗೆ ಸಡಿಲ ಧೋರಣೆ ತೋರುತ್ತಿದ್ದಾರೆ. ಹಲವಾರು ಸಮಿತಿಗಳು ಹಾಗೂ ಆಯೋಗಗಳು ಈ ವಿಷಯವಾಗಿ ಪರಿಶೀಲನೆ ನಡೆಸಿದ್ದರೂ ಸಹ ಅವು ತ್ವರಿತ ವಿಚಾರಣೆಯ ಮೂಲಕ ಸಂತ್ರಸ್ತರಿಗೆ ಗಣನೀಯವಾದ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿವೆ.
ನ್ಯಾಯಾಲಯದಲ್ಲಿ ಎದುರಾಗುವ ಕಿರುಕುಳಗಳು ಸಂತ್ರಸ್ತರನ್ನು ಇದಕ್ಕಿಂತಲೂ ಹೆಚ್ಚಾಗಿ ಬಾಧಿಸುತ್ತಿವೆ. ಭಾರತದಲ್ಲಿ ಬಹುದೊಡ್ಡ ಸಂಖ್ಯೆಯ ಪೊಲೀಸ್ ಠಾಣೆಗಳು ಅಪರಾಧ ಪ್ರಕರಣಗಳನ್ನು ನೋಂದಾಯಿಸಲು ನಿರಾಕರಿಸುತ್ತಿವೆಯೆಂಬದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಅಪರಾಧ ಪ್ರಕರಣಗಳನ್ನು ಮುಕ್ತವಾಗಿ ದಾಖಲಿಸುವುದರಿಂದ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ, ಸರಕಾರವು ಕಾನೂನು ಸುವ್ಯವಸ್ಥೆಯ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದೆ ಎಂಬ ಭಾವನೆ ಮೂಡಬಹುದೆಂಬ ಕಾರಣಕ್ಕಾಗಿ ಹೀಗೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಸರಕಾರದ ಸೂಚನೆಯಂತೆ ಪೊಲೀಸರು ಈ ರೂಢಿಯನ್ನು ಬೆಳೆಸಿಕೊಂಡಿದ್ದಾರೆ. ಪೊಲೀಸ್ ಠಾಣೆಯು ಎಫ್‌ಐಆರ್ ವರದಿಯನ್ನು ಸ್ವೀಕರಿಸಬೇಕಾದರೆ, ಅವರು ಎಫ್‌ಐಆರ್ ವರದಿಯನ್ನು ರಚಿಸಲು ಕೃಪೆ ತೋರಬೇಕಾದರೆ, ಠಾಣಾಧಿಕಾರಿ ಹಾಗೂ ಆತನ ಸಿಬ್ಬಂದಿಯ ಕೈಬಿಸಿ ಮಾಡಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಪೊಲೀಸರ ಕಡೆಯಿಂದ ಬದಲಾಗುವ ಇಚ್ಛೆಯು ಅತ್ಯಂತ ತೆಳುವಾಗಿ ಕಂಡುಬರುತ್ತಿದೆ. ಪೊಲೀಸರು ರಾಜಕೀಯ ವ್ಯವಸ್ಥೆ ಹಾಗೂ ಉನ್ನತ ಶ್ರೇಣಿಯ ಪೊಲೀಸ್ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದೆಡೆಗೆ ಬೆಟ್ಟು ಮಾಡುವ ಮೂಲಕ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಹೀಗಾಗಿ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ಈ ಮೂರು ಅಂಗಗಳಿಂದ ತನಗೆ ಯಾವುದೇ ನ್ಯಾಯ ದೊರೆಯದೆಂಬುದನ್ನು ಸಾಮಾನ್ಯ ನಾಗರಿಕರಿಗೆ ಮನವರಿಕೆಯಾಗಿದೆ. ಸಹಜವಾಗಿಯೇ ಆತ, ನ್ಯಾಯಾಲಯದ ಹೊರಗಿನ ದಾರಿಗಳನ್ನು ಅವಲಂಬಿಸುವುದರಲ್ಲಿ ಯಾವುದೇ ತಪ್ಪಿಲ್ಲವೆಂಬ ಚಿಂತನೆಯನ್ನು ಆತ ಬೆಳೆಸಿಕೊಳ್ಳುತ್ತಾನೆ. ಆತನ ದೃಷ್ಟಿಯಲ್ಲಿ, ‘ನ್ಯಾಯಾಲಯದ ಹೊರಗಿನವರು’ ನ್ಯಾಯವನ್ನು ತ್ವರಿತವಾಗಿ ದಕ್ಕಿಸಿಕೊಡುತ್ತಾರೆ, ಅದು ಕೂಡಾ ಸಣ್ಣ ಸೇವಾ ಶುಲ್ಕಕ್ಕೆ ! ಇದೊಂದು ಅಪಾಯಕಾರಿಯಾದ ಪರಿಸ್ಥಿತಿಯಾಗಿದೆ. ಇದನ್ನು ಪರಿಶೀಲಿಸದೆ ಇದ್ದಲ್ಲಿ, ಕಾನೂನುಪಾಲಕ ನಾಗರಿಕನಿಗೆ ನ್ಯಾಯವನ್ನು ಒದಗಿಸಲು ನೆರವಾಗುವಲ್ಲಿ ಸರಕಾರದ ನಿಧಾನಧೋರಣೆಯು, ಸಾಂವಿಧಾನಿಕ ಆಡಳಿತದ ಬುಡಕ್ಕೆ ಕೊಡಲಿಯೇಟು ನೀಡಲಿದೆ.
ಪ್ರಮಾಣಫಲಕವಾಗಿ ಸಿಟ್ ಮಾದರಿ
ಗುಜರಾತ್‌ನಲ್ಲಿ ಸಿಟ್‌ನ ಅನುಭವದಿಂದ ಪಾಠಗಳನ್ನು ಕಲಿಯಬೇಕಾಗಿದೆ. ಅಪರಾಧ ಸಂತ್ರಸ್ತರ ಪರಿಸ್ಥಿತಿಯನ್ನು ಸುಧಾರಿಸಲು ಅದು ನೆರವಾಗಬಲ್ಲದು. ಗುಜರಾತ್ ಗಲಭೆ ಪ್ರಕರಣದಲ್ಲಿ ಎಲ್ಲಾ ರೀತಿಯ ಮಹಾ ಅಡೆತಡೆಗಳನ್ನು ಮೀರಿ ನ್ಯಾಯಕ್ಕೆ ಜಯದೊರೆತಿದೆ. ನ್ಯಾಯಕ್ಕಾಗಿ ಆರ್ತನಾದಗೈದವರಿಗೆ ಹಾಗೂ ಅವರನ್ನು ನಿರ್ಭೀತವಾಗಿ ಮತ್ತು ಏಕಮನಸ್ಕತೆಯಿಂದ ಬೆಂಬಲಿಸಿದರವರಿಗೆ ದೊರೆತ, ಸಾಧಾರಣಕ್ಕಿಂತಲೂ ಹೆಚ್ಚಿನ ವಿಜಯವಾಗಿದೆ. ಆದರೆ ಇದು ಹೇಗೆ ಸಾಧ್ಯವಾಯಿತೆಂಬುದು ಅಧ್ಯಯನಕ್ಕೆ ಯೋಗ್ಯವಾದ ವಿಷಯವಾಗಿದೆ.
ಸಿಟ್, ಸುಪ್ರೀಂಕೋರ್ಟ್‌ನ ಮಾನವೀಯ, ನಾವೀನ್ಯತೆಯ ಹಾಗೂ ನ್ಯಾಯಸಮ್ಮತ ಮನೋಭಾವದ ನ್ಯಾಯಾಧೀಶರ ಮಿದುಳಿನ ಕೂಸಾಗಿದೆ. ದುರದೃಷ್ಟಕರ ಯಾವುದೇ ಭೀತಿ ಹಾಗೂ ತಾರತಮ್ಯವಿಲ್ಲದೆ ಸಿಟ್ ಸ್ವತಂತ್ರವಾಗಿ ಕೈಗೊಳ್ಳುವ ತನಿಖೆಯ ವಿಶ್ವಸನೀಯತೆಯನ್ನು ಕಾಪಾಡಿಕೊಳ್ಳುವುದೇ ಗುಜರಾತ್ ಗಲಭೆಯಿಂದ ಉಂಟಾಗಿರುವ ಸನ್ನಿವೇಶದ ಪ್ರಮುಖ ಕೆಲಸವಾಗಿದೆಯೆಂಬುದನ್ನು ಅವರು ಅರಿತಿದ್ದರು. ಸಿಟ್‌ಗೆ ಹಸ್ತಾಂತರಿಸಲಾದ 9 ಪ್ರಕರಣಗಳ ಪೈಕಿ ಎಂಟರ ತನಿಖೆ ಪೂರ್ಣಗೊಂಡಿದ್ದು, ನರೋಡಾ ಗಾಂವ್ ಹತ್ಯಾಕಾಂಡ ಪ್ರಕರಣದ ವಿಚಾರಣೆ ಮಾತ್ರ ಬಾಕಿಯುಳಿದಿದೆ. ಏಳು ಪ್ರಕರಣಗಳಲ್ಲಿ ಸಿಟ್ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಸಫಲವಾಗಿವೆ.
ಸಾಕ್ಷಿದಾರನ ಸಂರಕ್ಷಣೆಯ ಮಹತ್ವ
ಭಾರತವು, ಇತರ ಹಲವು ರಾಷ್ಟ್ರಗಳಂತೆ ಅದರಲ್ಲೂ ವಿಶೇಷವಾಗಿ ಅಮೆರಿಕವನ್ನು ಹೋಲಿಸಿದರೆ, ದೃಢವಾದ ಹಾಗೂ ಪ್ರಮಾದಕ್ಕೆ ಆಸ್ಪದವಿಲ್ಲದಂತಹ ಸಾಕ್ಷಿಗಳ ರಕ್ಷಣೆ ಯೋಜನೆಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂತಿಲ್ಲ. ನಮ್ಮ ದೇಶದಲ್ಲಿ ಆರೋಪಿಗಳು, ನಿರ್ಣಾಯಕ ಸಾಕ್ಷಿದಾರರನ್ನು ತೆಪ್ಪಗಾಗಿಸಲು ತೋಳ್ಬಲವನ್ನು ಪ್ರದರ್ಶಿಸುತ್ತಾರೆ. ಆದರೆ ಸಿಟ್ ನಿಭಾಯಿಸಿದ ಗುಜರಾತ್ ಗಲಭೆ ಪ್ರಕರಣಗಳಲ್ಲಿ ಹೀಗಾಗಲು ಅವಕಾಶ ನೀಡಲಿಲ್ಲ. ಸಾಕ್ಷಿಗಳ ರಕ್ಷಣೆಗೆ ಸಂಬಂಧಿಸಿ ವಿಸ್ತೃತವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಯಿತು ಹಾಗೂ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದ ತಂಡವು ಇದರ ಮೇಲ್ವಿಚಾರಣೆಯನ್ನೂ ನಡೆಸಿತು. ಸಿಟ್‌ನ ಟೀಕಾಕಾರರು ಏನೇ ಹೇಳಲಿ, ಅವರಿಗೆ ಆರೋಪಿಸಲು ಸಾಧ್ಯವಿಲ್ಲದ ಒಂದು ವಿಷಯವೆಂದರೆ, ಸಾಕ್ಷಿಗಳಿಗೆ ರಕ್ಷಣೆ ನೀಡುವಲ್ಲಿ ಅದು ಯಾವುದೇ ತಾರತಮ್ಯವೆಸಗಿಲ್ಲವೆಂಬುದು. ಸಿಟ್‌ಗೆ ಮುನ್ನ ಗುಜರಾತ್ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯನ್ನು ಕೇವಲ ಕ್ಷುಲ್ಲಕ ಹಾಗೂ ಪಕ್ಷಪಾತದಿಂದ ಕೂಡಿದ್ದೆಂದು ತಳ್ಳಿಹಾಕಲು ಸಾಧ್ಯವಿಲ್ಲ. ರಾಜ್ಯ ಪೊಲೀಸರು ಅನಾವರಣಗೊಳಿಸಿದ ನಿರ್ಣಾಯಕ ಪುರಾವೆಗಳು, ಸಿಟ್‌ನ ತನಿಖೆಗೆ ಉನ್ನತ ಚೌಕಟ್ಟೊಂದನ್ನು ನಿರ್ಮಿಸುವಲ್ಲಿ ನೆರವಿಗೆ ಬಂದವು.ಹಲವಾರು ನೈಜ ಹಾಗೂ ಕೃತಕ ಕೊರತೆಗಳ ನಡುವೆಯೂ ಸಿಟ್, ಕ್ರಿಯಾಶೀಲ ನ್ಯಾಯಾಧೀಶರೊಬ್ಬರ ಕ್ರಿಯಾಶೀಲ ಪ್ರಯೋಗವಾಗಿದ್ದು, ಅದಕ್ಕಾಗಿ ಪಟ್ಟ ಶ್ರಮ ಯಶಸ್ವಿಯಾಗಿದೆ. ಭವಿಷ್ಯದಲ್ಲಿ ಈ ರೀತಿಯ ತನಿಖೆಗಳ ಸಫಲತೆಗಳ ಬಗ್ಗೆ ಇದು ಭರವಸೆಯನ್ನು ಮೂಡಿಸಿದೆ.
ದೇಶದಲ್ಲಿ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯು ಈಗಲೂ ಸಹ ಕ್ಷಮಾರ್ಹವಲ್ಲದ ರಾಜಕೀಯಕರಣ ಹಾಗೂ ಲಂಚಗುಳಿತನದಿಂದ ಪೀಡಿತವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ಸಹಯೋಗದೊಂದಿಗೆ ಕೇಂದ್ರ ಸರಕಾರದ ಸಕಾಲಿಕ ಕಾರ್ಯಾಚರಣೆಯು ಬಹಳಷ್ಟು ನೆರವಾಗಬಲ್ಲದು. ಆದರೆ ಇದಕ್ಕಾಗಿ ಈವರೆಗೆ ಕಾಣಸಿಗದಂತಹ ಬಲವಾದ ಇಚ್ಛಾಶಕ್ತಿಯ ಅಗತ್ಯವಿದೆ.
ಕೃಪೆ: ದಿ ಹಿಂದೂ







