ಮಂಗಳೂರು ವಿವಿಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಕೊಣಾಜೆ, ಜೂ.10: ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ಹಾಗೂ ಮಂಗಳೂರು ವಿವಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವು ಶುಕ್ರವಾರ ಮಂಗಳೂರು ವಿವಿಯ ಮಹಿಳಾ ವಸತಿಗೃಹದ ಬಳಿ ನಡೆಯಿತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣಮಾಚಾರಿ ಗಿಡ ನೆಡುವ ಮೂಲಕ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಇಂದು ಪರಿಸರದ ಮೇಲಾಗುತ್ತಿರುವ ಅನ್ಯಾಯದಿಂದಾಗಿ ಪ್ರಕೃತಿಯ ವಾತಾವರಣದಲ್ಲಿ ಅಸಮತೋಲನ ಉಂಟಾಗಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತಿರುವುದನ್ನು ನಾವು ಮನಗಾಣಬಹುದು. ಪ್ರಕೃತಿಯ ರಕ್ಷಣೆಯ ಜೊತೆಯಲ್ಲಿ ಪರಿಸರದ ಸಮತೋಲನಕ್ಕಾಗಿ ನಾವೆಲ್ಲರೂ ಪಣ ತೊಡಬೇಕು. ಅದರಲ್ಲೂ ಶಿಕ್ಷಣ ಸಂಸ್ಥೆಗಳು ಇಂತಹ ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ, ಕೈಗಾರಿಕೆ, ಜನಸಂಖ್ಯೆಯ ಏರಿಕೆ ಮುಂತಾದ ಹಲವಾರು ಕಾರಣಗಳಿಂದ ಪ್ರಕೃತಿಯ ವಾತಾವರಣದ ಮೇಲೆ ಪರಿಣಾಮ ಬೀರಿ ಅದೆಷ್ಟೋ ಪ್ರಕೃತಿ ವಿಕೋಪಗಳು ನಡೆದಿವೆ. ರಾಜಸ್ಥಾನದಲ್ಲಿ ಈ ಬಾರಿ 51 ಡಿಗ್ರಿ ತಾಪಮಾನ ಏರಿರುವುದೇ ಇದಕ್ಕೆ ಉದಾಹರಣೆಯಾಗಿದ್ದು, ಪ್ರಕೃತಿಯ ಇಂತಹ ಅಸಮತೋಲನವನ್ನು ಸರಿದೂಗಿಸಲು ಪರಿಸರ ರಕ್ಷಣೆಯ ಜೊತೆಗೆ ವನಮಹೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಜಿಎಂ ಗಿರಿಧರ್, ಸುಕುಮಾರ್ ಹೆಗ್ಡೆ, ಸುಧಾಕರ ನಾಯಕ್, ಕಾರ್ಯಕ್ರಮ ಸಂಯೋಜಕಿ ಡಾ.ತ್ರಿವೇಣಿ, ಮಹಿಳಾ ವಸತಿ ನಿಲಯದ ವಾರ್ಡನ್ ಡಾ.ಶಶಿರೇಖಾ, ಪುರುಷೋತ್ತಮ ಮುಂತಾದವರು ಉಪಸ್ಥಿತರಿದ್ದರು. ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯ್ಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







