ಎರಡು ವಿದೇಶಿ ಸರಣಿಗೆ ಕಿವೀಸ್ ತಂಡ ಪ್ರಕಟ: ಭಾರತ ಮೂಲದ ಜೀತ್ ಗೆ ಸ್ಥಾನ

ಹ್ಯಾಮಿಲ್ಟನ್, ಜೂ.10: ಝಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕ ವಿರುದ್ದದ ಪ್ರವಾಸ ಸರಣಿಗೆ ನ್ಯೂಝಿಲೆಂಡ್ 16 ಸದಸ್ಯರನ್ನು ಒಳಗೊಂಡ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಭಾರತ ಮೂಲದ ಜೀತ್ ರಾವಲ್ ತಂಡಕ್ಕೆ ಆಯ್ಕೆಯಾಗಿರುವ ಹೊಸ ಮುಖ.ಭಾರತ ಮೂಲದ ಸ್ಪಿನ್ನರ್ ಐಶ್ ಸೋಧಿ ಎರಡು ವರ್ಷಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ.
27ರ ಹರೆಯದ ರಾವಲ್ 2004ರಲ್ಲಿ ತನ್ನ ಕುಟುಂಬದ ಸಮೇತ ನ್ಯೂಝಿಲೆಂಡ್‌ಗೆ ವಲಸೆ ಹೋಗುವ ಮೊದಲು ಭಾರತದಲ್ಲಿ ಜೂನಿಯರ್ ಕ್ರಿಕೆಟಿಗನಾಗಿದ್ದರು. ದೇಶಿಯ ಕ್ರಿಕೆಟ್‌ನಲ್ಲಿ 43.85 ಸರಾಸರಿ ಹೊಂದಿರುವ ರಾವಲ್ ಈ ವರ್ಷದ ದೇಶೀಯ ಟೂರ್ನಿಯಲ್ಲಿ ಆಕ್ಲೆಂಡ್ ಏಸೆಸ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟಾಗೊ ತಂಡದ ವಿರುದ್ಧ ಔಟಾಗದೆ 202 ರನ್ ಗಳಿಸಿದ್ದರು.
ಕಳೆದ 12 ತಿಂಗಳಿಂದ ರಾವಲ್‌ರ ಪ್ರಬುದ್ಧತೆ ಹಾಗು ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ಸುಧಾರಣೆಯಾಗಿದ್ದನ್ನು ನಾವು ಗಮನಿಸಿದ್ದೇವೆ. ಅವರು ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡು ನ್ಯೂಝಿಲೆಂಡ್ ಎ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತ ಸಜ್ಜಾಗಿದ್ದಾನೆ ಎನ್ನುವುದು ನಮ್ಮ ನಂಬಿಕೆ ಎಂದು ಕಿವೀಸ್ ತಂಡದ ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ನ್ಯೂಝಿಲೆಂಡ್ ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧ ಜುಲೈ 29 ಹಾಗೂ ಆಗಸ್ಟ್ 6 ರಂದು ಎರಡು ಟೆಸ್ಟ್ ಪಂದ್ಯಗಳನ್ನು ಆಡುತ್ತದೆ. ಆ ಬಳಿಕ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್ 19 ಹಾಗೂ 27 ರಂದು ಡರ್ಬನ್ ಹಾಗೂ ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಡುತ್ತದೆ.
ನ್ಯೂಝಿಲೆಂಡ್ ತಂಡ: ಡೌಗ್ ಬ್ರಾಸ್‌ವೆಲ್, ಮಾರ್ಕ್ ಕ್ರೆಗ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಹೆನ್ರಿ ನಿಕೊಲಸ್, ಲೂಕ್ ರಾಂಚಿ, ಜೀತ್ ರಾವಲ್, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವಾಗ್ನರ್, ಬಿಜೆ ವ್ಯಾಟ್ಲಿಂಗ್, ಕೇನ್ ವಿಲಿಯಮ್ಸನ್(ನಾಯಕ).







