ಇಂದು ಏಕದಿನ ಸರಣಿ ಆರಂಭ: ಝಿಂಬಾಬ್ವೆಗೆ ಧೋನಿ ನೇತೃತ್ವದ ಭಾರತದ ಸವಾಲು
ಹರಾರೆ, ಜೂ.10: ಹೊಸ ಆಟಗಾರರನ್ನು ಒಳಗೊಂಡ ಎಂ.ಎಸ್. ಧೋನಿ ನಾಯಕತ್ವದ ಟೀಮ್ ಇಂಡಿಯಾ ಶನಿವಾರ ಇಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಮೂಲಕ ಝಿಂಬಾಬ್ವೆಯ ವಿರುದ್ಧ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿ ಆರಂಭವಾಗಲಿದೆ.
ಝಿಂಬಾಬ್ವೆ ಆರು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗುತ್ತಿದೆ. ಜನವರಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಕೊನೆಯ ಏಕದಿನ ಸರಣಿ ಆಡಿತ್ತು. ಆ ಸರಣಿಯನ್ನು 2-3 ಅಂತರದಿಂದ ಸೋತಿತ್ತು. ಝಿಂಬಾಬ್ವೆ ತಂಡದಲ್ಲಿ ವಿ.ಸಿಬಾಂಡ, ಎಲ್ಟನ್ ಚಿಗುಂಬುರ, ಹ್ಯಾಮಿಲ್ಟನ್ ಮಸಕಝ, ಸಿಕಂದರ್ ರಝಾ, ಕ್ರೆಗ್‌ಎರ್ವಿನ್ ಹಾಗೂ ಸೀಯನ್ ವಿಲಿಯಮ್ಸ್‌ರಂತಹ ಹಲವು ಅನುಭವಿ ಆಟಗಾರರಿದ್ದಾರೆ. ಚಿಗುಂಬುರ ಅವರು ಫ್ಲವರ್ ಬ್ರದರ್ಸ್ ಆ್ಯಂಡಿ(213 ಏಕದಿನ) ಹಾಗೂ ಗ್ರಾಂಟ್(221 ಏಕದಿನ) ಬಳಿಕ ಝಿಂಬಾಬ್ವೆ ಪರ 200ಕ್ಕೂ ಅಧಿಕ ಏಕದಿನ ಪಂದ್ಯ ಆಡಿದ ಮೂರನೆ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
2013 ಹಾಗೂ 2015ರಲ್ಲಿ ಏಕಪಕ್ಷೀಯವಾಗಿ ಸಾಗಿದ್ದ ಸರಣಿಯಲ್ಲಿ ಝಿಂಬಾಬ್ವೆ ತಂಡ ಭಾರತ ವಿರುದ್ಧ ಕ್ಲೀನ್‌ಸ್ವೀಪ್ ಅನುಭವಿಸಿತ್ತು. ಈ ಬಾರಿ ಎಚ್ಚರಿಕೆಯಿಂದ ಆಡುವ ವಿಶ್ವಾಸದಲ್ಲಿದೆ. 2010ರ ಬಳಿಕ ಝಿಂಬಾಬ್ವೆ ತಂಡ ಭಾರತವನ್ನು ಏಕದಿನ ಹಾಗೂಟ್ವೆಂಟಿ-20 ಪಂದ್ಯಗಳಲ್ಲಿ ಮಣಿಸಿಲ್ಲ.
ಟೀಮ್ ನ್ಯೂಸ್:ಝಿಂಬಾಬ್ವೆ: ವಿಸಿ ಸಿಬಾಂಡ, ಸಿಯಾನ್ ವಿಲಿಯಮ್ಸ್ ಹಾಗೂ ಟೆಂಡೈ ಚಟಾರ ಝಿಂಬಾಬ್ವೆ ಪಾಳಯಕ್ಕೆ ವಾಪಸಾಗಲಿದ್ದಾರೆ. ಈ ಮೂವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ. ಆಲ್‌ರೌಂಡರ್ ಗ್ರೇಮ್ ಕ್ರೀಮರ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ರಿಚ್ಮಂಡ್ ಮುತುಂಬನಿ ವಿಕೆಟ್‌ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಕ್ರೆಗ್ ಎರ್ವಿನ್ ಅಥವಾ ಸಿಕಂದರ್ ರಾಝಾ ತಂಡದಿಂದ ಹೊರಗುಳಿಯಲಿದ್ದಾರೆ.
ಭಾರತ: ಇಬ್ಬರು ಸ್ಪೆಷಲಿಸ್ಟ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿದರ್ಭದ ಫೈಝ್ ಫಝಲ್ ಹಾಗೂ ಕರ್ನಾಟಕದ ಕೆಎಲ್ ರಾಹುಲ್‌ರನ್ನು ಭಾರತ ಕಣಕ್ಕಿಳಿಸಬಹುದು. ಈ ಇಬ್ಬರು ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಇನಿಂಗ್ಸ್ ಆರಂಭಿಸಲು ಎದುರು ನೋಡುತ್ತಿದ್ದಾರೆ.
ಸಿಡ್ನಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿರುವ ಮನೀಷ್ ಪಾಂಡೆ ಮೂರನೆ ಕ್ರಮಾಂಕದಲ್ಲಿ ಆಡಲಿದ್ದಾರೆ. ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ವಿಕೆಟ್‌ಕೀಪರ್-ದಾಂಡಿಗರಾದ ಅಂಬಟಿ ರಾಯುಡು ಹಾಗೂ ಧೋನಿ ನಡುವೆ ಪೈಪೋಟಿ ಇದೆ.
ಧೋನಿ 10 ವರ್ಷಗಳ ಬಳಿಕ ಝಿಂಬಾಬ್ವೆ ನೆಲದಲ್ಲಿ ಆಡುತ್ತಿದ್ದಾರೆ. 2005ರಲ್ಲಿ ಸೌರವ್ ಗಂಗುಲಿ ನಾಯಕತ್ವದ ತಂಡದಲ್ಲಿ ಕೊನೆಯ ಬಾರಿ ಆಡಿದ್ದರು. ಆಗ ಧೋನಿ ಕ್ರಿಕೆಟ್‌ಗೆ ಕಾಲಿಟ್ಟು ಆರು ತಿಂಗಳು ಆಗಿತ್ತು.
ರಿಷಿ ಧವನ್ ಆಲ್‌ರೌಂಡರ್ ಸ್ಥಾನ ತುಂಬಲಿದ್ದಾರೆ. ಅಕ್ಷರ್ ಪಟೇಲ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಎಡಗೈ ವೇಗಿಗಳಾದ ಬರಿಂದರ್ ಸ್ರಾನ್ ಹಾಗೂ ಜಯದೇವ್ ಉನದ್ಕಟ್ ನಡುವೆ ಸ್ಪರ್ಧೆಯಿದೆ. ಈ ವರ್ಷದ ಐಪಿಎಲ್‌ನಲ್ಲಿ ಎರಡನೆ ಗರಿಷ್ಠ ಸಂಖ್ಯೆಯ ವಿಕೆಟ್‌ಗಳನ್ನು ಉರುಳಿಸಿರುವ ಲೆಗ್ ಸ್ಪಿನ್ನರ್ ಯುಝ್ವೇಂದ್ರ ಚಾಹಲ್ ಚೊಚ್ಚಲ ಪಂದ್ಯ ಆಡುವುದಕ್ಕಾಗಿ ಕಾಯುತ್ತಿದ್ದಾರೆ.
ಅಂಕಿ-ಅಂಶ
* ಭಾರತ ಹರಾರೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ 13-5 ಗೆಲುವು-ಸೋಲು ದಾಖಲೆ ಹೊಂದಿದೆ. ಝಿಂಬಾಬ್ವೆ ವಿರುದ್ಧ 11 ಪಂದ್ಯಗಳನ್ನು ಜಯಿಸಿದೆ.
* ಝಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಕ್ರಿಕೆಟಿಗರಲ್ಲಿ ಕೇದಾರ್ ಜಾಧವ್ ಧೋನಿ ನಂತರ ಅತ್ಯಂತ ಹೆಚ್ಚು ಸರಾಸರಿ(48.18) ಹೊಂದಿದ್ದಾರೆ. 2015ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಕೊನೆಯ ಬಾರಿ ಏಕೈಕ ಶತಕ ಬಾರಿಸಿದ್ದರು.
*ಭಾರತ ತಂಡ ಝಿಂಬಾಬ್ವೆ ವಿರುದ್ಧ ಆಡಿರುವ ಕಳೆದ 9 ಪಂದ್ಯಗಳಲ್ಲೂ ಜಯ ಸಾಧಿಸಿದೆ.
*ಗ್ರೆಮ್ ಕ್ರಿಮರ್ ಇದೇ ಮೊದಲ ಬಾರಿ ಝಿಂಬಾಬ್ವೆ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಸಂಭಾವ್ಯ ತಂಡ
ಭಾರತ: ಕೆಎಲ್ ರಾಹುಲ್, ಫೈಝ್ ಫಝಲ್, ಮನೀಶ್ ಪಾಂಡೆ, ಅಂಬಟಿ ರಾಯುಡು, ಕರುಣ್ ನಾಯರ್, ಎಂಎಸ್ ಧೋನಿ(ನಾಯಕ/ವಿಕೆಟ್‌ಕೀಪರ್), ರಿಷಿ ಧವನ್, ಅಕ್ಷರ್ ಪಟೇಲ್, ಧವಳ್ ಕುಲಕರ್ಣಿ, ಜಸ್‌ಪ್ರೀತ್ ಬುಮ್ರಾ, ಬರಿಂದರ್ ಸ್ರಾನ್/ಜಯದೇವ್ ಉನದ್ಕಟ್.
ಝಿಂಬಾಬ್ವೆ: ಚಾಮು ಚಿಬಾಬಾ, ವಸಿ ಸಿಬಾಂಡ, ಹ್ಯಾಮಿಲ್ಟನ್ ಮಸಕಝ, ಸಿಯಾನ್ ವಿಲಿಯಮ್ಸ್, ರಿಚ್ಮಂಡ್ ಮುತುಂಬನಿ(ವಿಕೆಟ್‌ಕೀಪರ್), ಸಿಕಂದರ್ ರಝಾ/ಕ್ರೆಗ್ ಎರ್ವಿನ್,ಗ್ರೇಮ್ ಕ್ರೀಮರ್(ನಾಯಕ), ವೆಲ್ಲಿಂಗ್ಟನ್ ಮಸಕಝ, ಡೊನಾಲ್ಡ್ ಟಿರಿಪಾನೊ, ಟೆಂಡೈ ಚಟಾರ.
ಪಂದ್ಯದ ಸಮಯ: ಮಧ್ಯಾಹ್ನ 12:30







