ಸರಕಾರಿ ಶಾಲಾ ಮಕ್ಕಳ ಕಲಾ ವೈಭವ!

ಮಂಗಳೂರು, ಜೂ. 10: ನಗರದ ಪ್ರಸಾದ್ ಆರ್ಟ್ ಗ್ಯಾಲರಿ ಇಂದು ಬಂಟ್ವಾಳ ಮಂಚಿಯ ಸರಕಾರಿ ಪ್ರೌಢಶಾಲೆಯ 25 ಮಂದಿ ವಿದ್ಯಾರ್ಥಿಗಳ ಕಲಾವೈಭವವನ್ನು ಅನಾವರಣಗೊಳಿಸಿತು. ವ್ಯರ್ಥವಾದ ಬಣ್ಣದ ಪೇಪರ್ ತುಂಡುಗಳನ್ನು ಬಳಸಿಕೊಂಡು ರಚಿಸಿದ ‘ಕೊಲಾಜ್’ ಕಲಾಕೃತಿಗಳು ಹೈಸ್ಕೂಲ್ ಮಕ್ಕಳ ಸಾಧನೆಗೆ ಸಾಕ್ಷಿಯಾಯಿತು. ಪ್ರೌಢಶಾಲಾ ಮಕ್ಕಳ ಚಿತ್ರಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿದ ರಂಗ ನಿರ್ದೇಶಕ ಜೀವನ್‌ರಾಮ್ ಸುಳ್ಯ, ಹುಡುಕಾಟದ ಪ್ರಕ್ರಿಯೆಯಲ್ಲಿ ಹುಟ್ಟಿರುವ ಕೊಲಾಜ್ ಕಲಾ ಮಾಧ್ಯಮವು ಇಂದು ಸರಕಾರಿ ಶಾಲಾ ಮಕ್ಕಳ ಕಲಾ ಪ್ರತಿಭೆಯನ್ನೂ ಹೊರಹೊಮ್ಮಿಸಿದೆ ಎಂದರು. ಅತ್ಯಂತ ಅಪರೂಪವಾದ ಕೊಲಾಜ್ ಮಾಧ್ಯಮಕ್ಕೆ ಮಕ್ಕಳನ್ನು ಪರಿಚಯಿಸಿರುವುದು ಶ್ಲಾಘನೀಯ ಕಾರ್ಯ. ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಚೌಕಟ್ಟಿಗಾಗಿ ಬಣ್ಣದ ಪೇಪರ್‌ಗಳನ್ನು ಹುಡುಕಿ ಅವರು ರಚಿಸಿರುವ ಚಿತ್ರಗಳು ಯಾವುದೇ ಹಿರಿಯ ಕಲಾವಿದರ ಕಲಾಕೃತಿಗಳಿಗೆ ಕಡಿಮೆಯಿಲ್ಲ ಎಂದು ಬಣ್ಣಿಸಿದರು. ಹಿರಿಯ ಕಲಾವಿದ ಮತ್ತು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಮಾತನಾಡಿ, ಬೀಜದೊಳಗಿದೆ ಮರ, ಬೆಳೆಸಿ ಪೋಷಿಸುವವರದೇ ಬರ... ಎಂಬ ಕವನದ ಸಾಲಿನಂತೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರಯತ್ನ ನಡೆಸುವ ಶಿಕ್ಷಕರು ಬೇಕಾಗಿದ್ದಾರೆ. ಕೊಳ್ನಾಡು ಶಾಲೆಯ ಮಕ್ಕಳು ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಅಭಿನಂದಿಸಿದರು. ಕಲಾಶಿಕ್ಷಕ ತಾರಾನಾಥ ಕೈರಂಗಳ ಮಕ್ಕಳು ಕೊಲಾಜ್ ಚಿತ್ರಕಲಾಕೃತಿಯನ್ನು ರಚಿಸಿದ ಕಾರಣ ತಿಳಿಸುತ್ತಾ, ಖಾಸಗಿ ಶಾಲೆಯಲ್ಲಿ ಆರ್ಥಿಕವಾಗಿ ಸ್ಥಿತಿವಂತರ ಮಕ್ಕಳು ಬಣ್ಣದ ಪೆನ್ಸಿಲ್ ಪೆನ್‌ಗಳನ್ನು ತರಲು ಸಮರ್ಥರಾಗಿರುತ್ತಾರೆ. ಆದರೆ ಸರಕಾರಿ ಶಾಲೆಗೆ ಬರುವ ಆರ್ಥಿಕವಾಗಿ ಬಡವಾಗಿರುವ ಮಕ್ಕಳಿಗೆ ಇದು ಕಷ್ಟದ ಕೆಲಸ.ಹಾಗಾಗಿ ವ್ಯರ್ಥವಾಗುವ ಹಳೆ ಪೇಪರ್‌ಗಳನ್ನೇ ಬಳಸಿ ಯಾವ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸಬಹುದು ಎಂದು ತಿಳಿಸಿದೆ. ಮಕ್ಕಳು ಅದನ್ನು ಸಾಕಾರಗೊಳಿಸಿದ್ದಾರೆ ಎಂದರು. ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಚಕ ವೈ. ಶಿವರಾಮಯ್ಯ, ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ, ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ. ಪುರುಷೋತ್ತಮ ನಾಯಕ್, ಕೊಳ್ನಾಡು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ವಿ. ಶ್ರೀರಾಮಮೂರ್ತಿ ಉಪಸ್ಥಿತರಿದ್ದರು. ಚಂದ್ರಶೇಖರ ಪಾತೂರು ಕಾರ್ಯಕ್ರಮ ನಿರೂಪಿಸಿದರು.
ಜೂ.12ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ
ಪ್ರದರ್ಶನದಲ್ಲ್ಲಿ 10ನೆ ತರಗತಿಯ ಹರಿಚರಣ್, ಕೃತಿಕಾ ಎ., ಗುರುಕುಮಾರ್, ಶರಣ್ಯ ರೈ, ರಶ್ಮಿತಾ ಎನ್., ಅಶ್ವಿತಾ ಕೆ., ಅಭಿಷೇಕ್, ಪುಷ್ಪಾ, ಆಶಲತಾ ಎನ್., ಮಹಮ್ಮದ್ ಮಸೂದ್, ವಿನಯಶ್ರೀ ಕೆ., ಸೂರಜ್, ಪೂರ್ಣೇಶ್, 9ನೆ ತರಗತಿಯ ಸಾಗರ್, ಭವ್ಯಶ್ರೀ, ಪಾರ್ಥೇಶ್ ಎನ್., ನವ್ಯಶ್ರೀ ಎಂ., ವಂದನಾ ಕುಮಾರಿ, ಪ್ರತೀಕ್ಷಾ ಎನ್., ಪ್ರಜ್ವಲ್ ಕುಮಾರ್, 8ನೆ ತರಗತಿಯ ಸಹನ್ ಬಿ., ಅಂಕಿತ್, ಶ್ರೀನಿಧಿ ಪಾತೂರು, ಸೌಜನ್ಯಾ ರೈ, ದೃಶ್ಯಾರವರ ಚಿತ್ರಕಲೆಗಳು ಪ್ರದರ್ಶನಗೊಳ್ಳುತ್ತಿವೆ. ಜೂ. 12ರವರೆಗೆ ಪ್ರತಿದಿನ ಬೆಳಗ್ಗೆ 9:30ರಿಂದ ಸಂಜೆ 7ರವರೆಗೆ ಆಸಕ್ತರಿಗೆ ವೀಕ್ಷಣೆಗೆ ಮುಕ್ತ ಅವಕಾಶವಿದೆ.







