ಭಾರತೀಯ ಚಿತ್ರೋದ್ಯಮಕ್ಕೆ ಸೆನ್ಸಾರ್ ಎಂಬ ವಿಲನ್!

ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ದಿನಗಳಿಂದ ಮೊದಲು ಅದರ ಕಣ್ಣು ಬಿದ್ದಿರುವುದು ಈ ದೇಶದ ದೃಶ್ಯ ಮಾಧ್ಯಮಗಳ ಮೇಲೆ. ತನ್ನ ಸುಳ್ಳು ಇತಿಹಾಸವನ್ನು ಪ್ರತಿಷ್ಠಾಪಿಸಲು ಅದಕ್ಕೆ ಟಿವಿ ಮತ್ತು ಸಿನಿಮಾಗಳ ಮೇಲಿನ ಹಿಡಿತ ಅತ್ಯಗತ್ಯವಾಗಿತ್ತು. ಕಾರ್ಪೊರೇಟ್ ಧಣಿಗಳ ಮೂಲಕ ಬಹುತೇಕ ಪತ್ರಿಕೆ ಮತ್ತು ಸುದ್ದಿ ವಾಹಿನಿಗಳನ್ನು ದುಡ್ಡು ಚೆಲ್ಲಿ ಕೊಂಡುಕೊಂಡ ಆರೆಸ್ಸೆಸ್‌ಗೆ ಅತಿ ದೊಡ್ಡ ಸವಾಲಾಗಿದ್ದುದು ಸಿನಿಮಾ ಮತ್ತು ನಾಟಕ ಕ್ಷೇತ್ರಗಳಲ್ಲಿ ಆಳವಾಗಿ ಬೇರೂರಿರುವ ಸೃಜನಶೀಲ ವ್ಯಕ್ತಿತ್ವಗಳು. ಈ ದೇಶದಲ್ಲಿ ಇಂದಿಗೂ ಜಾತ್ಯತೀತ ವೌಲ್ಯವನ್ನು ಎತ್ತಿ ಹಿಡಿಯುತ್ತಿರುವ ಕ್ಷೇತ್ರಗಳಲ್ಲಿ ಸಿನಿಮಾ ಮತ್ತು ರಂಗಭೂಮಿಯ ಪಾತ್ರ ಬಹು ದೊಡ್ಡದು. ಅದಕ್ಕೆ ಕಾರಣ, ಆ ಕ್ಷೇತ್ರದಲ್ಲಿರುವ ಅತ್ಯಂತ ಸೂಕ್ಷ್ಮ ಸಂವೇದನೆಗಳುಳ್ಳ ಪ್ರತಿಭಾವಂತರು. ಸತ್ಯಜಿತ್ ರೇಯಿಂದ ಹಿಡಿದು, ಅನುರಾಗ್ ಕಶ್ಯಪ್‌ವರಗೆ ಸಿನಿಮಾ ಕ್ಷೇತ್ರವನ್ನು ಮಾನವೀಯ ಉದ್ದೇಶಕ್ಕಾಗಿ ದುಡಿಸಿಕೊಂಡ ಬಹುದೊಡ್ಡ ಪರಂಪರೆ ನಮ್ಮದಾಗಿದೆ.
ಕೇವಲ ಬಾಲಿವುಡ್ ಜನರು ಮಾತ್ರವಲ್ಲ, ವಿವಿಧ ಪ್ರಾದೇಶಿಕ ಭಾಷೆಗಳೂ ಭಾರತದ ಬಹು ಸಂಸ್ಕೃತಿಗೆ ದೃಶ್ಯ ಮಾಧ್ಯಮಗಳ ಮೂಲಕ ನೀಡುತ್ತಾ ಬಂದಿರುವ ಕೊಡುಗೆ ಸಣ್ಣದಲ್ಲ. ಈ ಸೃಜನಶೀಲ ಮನಸ್ಸುಗಳನ್ನು ಎದುರಿಸುವುದು ರಾಜಕೀಯದಲ್ಲಿ ಉಳಿದ ಸ್ಪರ್ಧಿಗಳನ್ನು ಎದುರಿಸಿದಂತಲ್ಲ. ಈ ಕಾರಣದಿಂದಲೇ ಆರೆಸ್ಸೆಸ್‌ನ ಕಣ್ಣು ಫಿಲ್ಮ್ ಆ್ಯಂಡ್ ಟೆಲಿವಿಜನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ) ಮೇಲೆ ಬಿತ್ತು. ಅದರ ಮೇಲೆ ಹಿಡಿತ ಸಾಧಿಸುವ ಭಾಗವಾಗಿ ಅದರ ಅಧ್ಯಕ್ಷನಾಗಿ ದೃಶ್ಯ ಮಾಧ್ಯಮದ ಕುರಿತಂತೆ ಏನೇನೂ ತಿಳಿದಿಲ್ಲದ ಒಬ್ಬ ಕಳಪೆ ನಟನನ್ನು ತಂದು ಕೂರಿಸುವುದಕ್ಕೆ ಆರೆಸ್ಸೆಸ್ ಮುಂದಾಯಿತು. ಈ ಮೂಲಕ, ತನ್ನ ಮೂಗಿನ ನೇರಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹುನ್ನಾರವನ್ನು ಅದು ಮಾಡಿತ್ತು. ಆದರೆ ಇದರ ವಿರುದ್ಧ ಮೊತ್ತಮೊದಲು ಅಲ್ಲಿನ ವಿದ್ಯಾರ್ಥಿಗಳೇ ದಂಗೆ ಎದ್ದರು. ಸರಕಾರದ ಆಯ್ಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಹಲವು ತಿಂಗಳು ಕಾಲ ತರಗತಿ ಬಹಿಷ್ಕರಿಸಿದ್ದು ಈಗ ಇತಿಹಾಸ. ಆರೆಸ್ಸೆಸ್‌ನ ಸಾಂಸ್ಕೃತಿಕ ದಾಳಿಯ ವಿರುದ್ಧ ಮೊತ್ತಮೊದಲು ದಂಗೆಯೆದ್ದದ್ದು ಎಫ್‌ಟಿಐಐ ವಿದ್ಯಾರ್ಥಿಗಳು ಎಂದರೆ ಅದರಲ್ಲಿ ತಪ್ಪೇನೂ ಇಲ್ಲ.
ಸಿನಿಮಾ ಕ್ಷೇತ್ರದಲ್ಲಿನ ಪ್ರತಿಭಾನ್ವಿತ ಜಾತ್ಯತೀತ ಶಕ್ತಿಗಳನ್ನು ಮಣಿಸಲು ಆರೆಸ್ಸೆಸ್ ನಡೆಸಿದ ಎರಡನೆ ಕೃತ್ಯ ಸೆನ್ಸಾರ್ ಮಂಡಳಿಗೆ ತನಗೆ ಬೇಕಾದ ವ್ಯಕ್ತಿಯನ್ನು ಸೇರಿಸಿದ್ದು. ಈ ಕುರಿತಂತೆಯೂ ಆರೋಪ ಪ್ರತ್ಯಾರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಸರಕಾರದ ನೀತಿಯ ವಿರುದ್ಧ ಸೆನ್ಸಾರ್ ಮಂಡಳಿಯಲ್ಲಿರುವ ಹಲವರು ರಾಜೀನಾಮೆಯನ್ನು ನೀಡಿದರು. ಸರಕಾರಕ್ಕೂ ಅದೇ ಬೇಕಾಗಿತ್ತು. ಎಲ್ಲ ತಿಕ್ಕಾಟದ ಬಳಿಕ ಪಹ್ಲಾಜ್ ನಿಹಲಾನಿ ಅವರನ್ನು ಆಯ್ಕೆ ಮಾಡಲಾಯಿತು. ಅದರ ಪರಿಣಾಮವನ್ನು ಬಾಲಿವುಡ್ ಇದೀಗ ಅನುಭವಿಸುತ್ತಿದೆ.
ಸಾಧಾರಣವಾಗಿ ಸೆನ್ಸಾರ್ ಮಂಡಳಿಯಂತಹ ಸೂಕ್ಷ್ಮ ಸ್ಥಳದಲ್ಲಿರುವವರು ಸೃಜನಶೀಲತೆಯ ಚಮಚಾಗಳಾಗಿರಬೇಕು. ಆದರೆ ಪೆಹಲಾನಿಯವರು ಬಹಿರಂಗವಾಗಿಯೇ ''ತಾನು ನರೇಂದ್ರ ಮೋದಿಯ ಚಮಚಾ'' ಎಂದು ಹೆಮ್ಮೆಯಿಂದ ಘೋಷಿಸಿದ್ದಾರೆ. ಸೃಜನಶೀಲ ಕಲಾವಿದರಿರಬೇಕಾದ ಜಾಗದಲ್ಲಿ ರಾಜಕೀಯ ಚೇಲನೊಬ್ಬ ಇದ್ದರೆ ಏನಾಗಬೇಕೋ ಅದೇ ಬಾಲಿವುಡ್‌ನಲ್ಲೂ ಆಗುತ್ತಿದೆ. ಹಿಂದಿ ಚಿತ್ರರಂಗದ ಅತ್ಯಂತ ಸೂಕ್ಷ್ಮ ಮನಸ್ಸಿನ ನಿರ್ದೇಶಕರು ಮಾನಸಿಕ ಆಘಾತವನ್ನು ಎದುರಿಸಬೇಕಾದಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ. ಚಿತ್ರ ನಿರ್ದೇಶನದ ಯಾವ ವ್ಯಾಕರಣಗಳೂ ಗೊತ್ತಿಲ್ಲದವರು ಮನುಷ್ಯರು ಪ್ರತಿಭಾವಂತ ನಿರ್ದೇಶಕರ ಚಿತ್ರದೊಳಗೆ ಕೈಯಾಡಿಸುವುದಕ್ಕೆ, ಕತ್ತರಿಯಾಡಿಸುವುದಕ್ಕೆ ಮುಂದಾಗುತ್ತಿದ್ದಾರೆ. ಹೇಗೆ ಚಿತ್ರ ಮಾಡಬೇಕು ಎಂದು ಕಲಿಸಲು ಮುಂದಾಗುತ್ತಿದ್ದಾರೆ. ಅನುರಾಗ್ ಕಶ್ಯಪ್ ಅವರ 'ಉಡ್ತಾ ಪಂಜಾಬ್' ಚಿತ್ರ ಈ ಕಾರಣದಿಂದಲೇ ದೇಶಾದ್ಯಂತ ಸುದ್ದಿಯಾಗಿದೆ. ಈ ಚಿತ್ರದಲ್ಲಿ 80ಕ್ಕೂ ಅಧಿಕ ಕತ್ತರಿ ಪ್ರಯೋಗಗಳನ್ನು ಸೆನ್ಸಾರ್ ಮಂಡಳಿಯು ಸೂಚಿಸಿದೆ.
ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಸೇವನೆ ಮತ್ತು ಅದರ ಪರಿಣಾಮಗಳನ್ನು ತನ್ನೊಳಗೆ ಇಟ್ಟುಕೊಂಡು ಸಿದ್ಧಗೊಂಡಿರುವ ಉಡ್ತಾ ಪಂಜಾಬ್‌ನಿಂದ ಆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆಯಂತೆ. ಯಾಕೆಂದರೆ ಅಲ್ಲಿರುವ ಸರಕಾರದ ಪಾಲುದಾರ ಬಿಜೆಪಿಯೇ ಆಗಿದೆ. ಈ ಚಿತ್ರದಿಂದಾಗಿ ಆ ಸರಕಾರದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಸೆನ್ಸಾರ್ ಮಂಡಳಿಯ ಮೋದಿ ಚಮಚಾನ ಆತಂಕವಾಗಿದೆ. ಪಂಜಾಬ್ ಎನ್ನುವ ಶಬ್ದವನ್ನೇ ತೆಗೆದು ಹಾಕಲು ಮುಂದಾಗಿರುವ ಸೆನ್ಸಾರ್ ಬೋರ್ಡ್, ಶಾಸಕ, ಸಂಸತ್ ಮೊದಲಾದ ಶಬ್ದಗಳನ್ನೂ ಅಳಿಸಿ ಹಾಕಲು ಮುಂದಾಗಿದೆ. ಇದೀಗ ಸೆನ್ಸಾರ್ ಮಂಡಳಿಯ ನಿರ್ಧಾರದ ವಿರುದ್ಧ ನಿರ್ಮಾಪಕ ಅನುರಾಗ್ ಕಶ್ಯಪ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್ ಕಶ್ಯಪ್ ಪರವಾಗಿ ಮಾತನಾಡಿದೆ. ಸೆನ್ಸಾರ್‌ನ ಕೆಲಸ ಪ್ರಮಾಣ ಪತ್ರ ನೀಡುವುದೇ ಹೊರತು ಯಾವ ರೀತಿ ಚಿತ್ರ ನಿರ್ಮಾಣ ಮಾಡಬೇಕು ಎಂದು ನಿರ್ದೇಶನ ನೀಡುವುದಲ್ಲ ಎಂದು ಹೇಳಿದೆ.
ಸೆನ್ಸಾರ್ ಬೋರ್ಡ್ ಕತ್ತರಿ ಹಾಕಲೇ ಬಾರದು ಎಂದಲ್ಲ. ಯಾರದಾದರೂ ನೇರ ವೈಯಕ್ತಿಕ ನಿಂದನೆಗಳಿದ್ದರೆ, ಅದು ಕೋಮುಗಲಭೆ ಅಥವಾ ಇನ್ನಿತರ ಸಂಘರ್ಷಕ್ಕೆ ಕಾರಣವಾಗುವುದಾದರೆ ಸಾಮಾಜಿಕ ಹಿತದೃಷ್ಟಿಯಿಂದ ಕತ್ತರಿ ಹಾಕಬಹುದು. ಆದರೆ, ಕೆಲವು ರಾಜಕೀಯ ಪಕ್ಷಗಳ ಹಿತದೃಷ್ಟಿಯಿಂದ ಸತ್ಯದ ನಾಲಗೆಯನ್ನೇ ಕತ್ತರಿಸಿದರೆ ಒಂದು ಸೃಜನಶೀಲ ಕೃತಿಯಲ್ಲಿ ಮತ್ತೇನು ಉಳಿಯಿತು? ಒಂದು ವೇಳೆ ಅಪ್ರಾಪ್ತ ವಯಸ್ಸಿನ ಹುಡುಗರು ನೋಡಬಾರದಂತಹ, ಕೇಳಬಾರದಂತಹ ದೃಶ್ಯಗಳು, ಸಂಭಾಷಣೆಗಳು ಇದ್ದರೆ ಅದಕ್ಕಾಗಿ 'ಎ' ಪ್ರಮಾಣ ಪತ್ರವನ್ನು ನೀಡುವ ಅಧಿಕಾರ ಸೆನ್ಸಾರ್‌ಗಿದೆ. ಆದರೆ ಇಡೀ ಸಿನಿಮಾವೇ ತನ್ನ ಮೂಗಿನ ನೇರಕ್ಕಿರಬೇಕು ಎಂದು ಸೆನ್ಸಾರ್ ಸರ್ವಾಧಿಕಾರವನ್ನು ಪ್ರದರ್ಶಿಸುವುದು ಸೃಜನಶೀಲತೆಯನ್ನು ಕೊಂದು ಹಾಕುತ್ತದೆ. ಇದು ಬಾಲಿವುಡ್‌ನ್ನು ಸಂಪೂರ್ಣ ನಿಂತ ನೀರಾಗಿಸುತ್ತದೆ. ಸೆನ್ಸಾರ್‌ನ ಉದ್ದೇಶವೂ ಇದೇ ಇರಬಹುದು. ಯಾಕೆಂದರೆ ತನಗೆ ಯಾವ ರೀತಿಯ ಸಿನಿಮಾಗಳು ಬೇಕು ಎನ್ನುವುದನ್ನು ಬೇರೆ ಬೇರೆ ರೀತಿಯಲ್ಲಿ ನಿರ್ದೇಶಕರಿಗೆ ಸರಕಾರ ಸಂದೇಶಗಳನ್ನು ರವಾನಿಸುತ್ತಿದೆ.
ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರವನ್ನೇ ಗಮನಿಸಿ. ಕನ್ನಡ, ತಮಿಳು, ಹಿಂದಿಯಲ್ಲಿ ಅತ್ಯುತ್ತಮ ಚಿತ್ರಗಳಿದ್ದರೂ 'ಬಾಹುಬಲಿ' ಎನ್ನುವ ಕಾಲ್ಪನಿಕ, ಭ್ರಾಮಕ, ಅಪೂರ್ಣ ಚಿತ್ರವೊಂದಕ್ಕೆ ಪ್ರಶಸ್ತಿಯನ್ನು ನೀಡಲಾಯಿತು. ಅಂದರೆ ನೀವು ಚಂದಮಾಮ ಕತೆಗಳನ್ನು ಸಿನಿಮಾ ಮಾಡಿ ತನ್ನಿ. ನಾವು ಅದಕ್ಕೆ ಪ್ರಶಸ್ತಿಯನ್ನು ನೀಡುತ್ತೇವೆ ಎನ್ನುತ್ತಿದೆ. ಸೆನ್ಸಾರ್ ಮಂಡಳಿಯ ಕೃತ್ಯವೂ ಅಂತಿಮವಾಗಿ ಇದನ್ನೇ ಹೇಳುತ್ತಿದೆ. ಸೆನ್ಸಾರ್ ಮಂಡಳಿಯ ಈ ಕೃತ್ಯವನ್ನು ಒಕ್ಕೊರಲಲ್ಲಿ ವಿರೋಧಿಸದೇ ಇದ್ದರೆ ಮುಂದಿನ ದಿನಗಳಲ್ಲಿ ನಾವು ಒಳ್ಳೆಯ ಚಿತ್ರಗಳಿಗಾಗಿ ಇರಾನಿ, ಕೊರಿಯಾ ಮೊದಲಾದ ಭಾಷೆಗಳ ಕಡೆಗೆ ಕಣ್ಣು ಹಾಯಿಸಬೇಕಾಗುತ್ತದೆ. ಭಾರತೀಯ ಚಿತ್ರರಂಗ ಆರೆಸ್ಸೆಸ್ ಬರೆಯುವ ಚಂದಮಾಮ ಕತೆಗಳಿಗೆ ಸೀಮಿತವಾಗುವ ಅಪಾಯವಿದೆ.







