ಸುಳ್ಯ: ಹೊರಚರಂಡಿಯಾದ ಒಳಚರಂಡಿ
ಮತ್ತೆ ಬಾಯ್ದೆರೆದ ಮ್ಯಾನ್‌ಹೋಲ್

ಸುಳ್ಯ, ಜೂ.10: ಇಲ್ಲಿನ ಬಸ್ ನಿಲ್ದಾಣದ ಬಳಿ ಮುಖ್ಯರಸ್ತೆಯಲ್ಲಿರುವ ಒಳಚರಂಡಿ ಮ್ಯಾನ್‌ಹೋಲ್ ಬಾಯ್ದೆರೆದು ತ್ಯಾಜ್ಯ ಉಕ್ಕಿ ಹರಿದಿದ್ದು, ರಸ್ತೆಯಿಡೀ ತುಂಬಿ ಪಟ್ಟಣದಲ್ಲಿ ದುರ್ನಾತದಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಳಚರಂಡಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಕೊಟ್ಟ 1 ವರ್ಷದಲ್ಲಿ ಮೂರನೆ ಬಾರಿಗೆ ಅವಾಂತರ ಸೃಷ್ಟಿಯಾಗಿದೆ. ಒಳಚರಂಡಿ ಸಂಪರ್ಕ ಪಡೆದವರು ತ್ಯಾಜ್ಯ ನೀರಿನೊಂದಿಗೆ ಘನತ್ಯಾಜ್ಯಗಳನ್ನು ಹಾಕುವುದರಿಂದ ಸಮಸ್ಯೆಯಾಗುತ್ತಿದ್ದು, ಒಳಚರಂಡಿ ಸಂಪರ್ಕ ನೀಡುವ ರಸ್ತೆ ಬದಿಯ ಕಿರು ಚೇಂಬರ್‌ಗಳಿಗೆ ಜಾಲರಿಯನ್ನು ಅಳವಡಿಸಲಾಗಿದೆ. ಹಾಗಿದ್ದೂ ಈ ಜಾಲರಿಯನ್ನು ತೆರೆದು ಚಿಕನ್ ಸೆಂಟರ್‌ಗೆ ಸಂಬಂಧಿಸಿದವರು ತ್ಯಾಜ್ಯವನ್ನು ಹಾಕುತ್ತಿದ್ದಾರೆ ಎಂಬ ಆರೋಪವಿದೆ. ತ್ಯಾಜ್ಯ ರಸ್ತೆಯಿಡೀ ಹರಡಿರು ವುದರಿಂದ ರಸ್ತೆಯಲ್ಲಿ ಸಾಗುವ ವಾಹನ ಗಳ ಚಕ್ರಕ್ಕೆ ಸಿಕ್ಕಿ ನಗರವಿಡೀ ಹರಡುತ್ತಿದೆ. ಹಾಗಾಗಿ ದುರ್ನಾತ ನಗರಕ್ಕೆ ವ್ಯಾಪಿಸಿದೆ. ಬಾಯ್ದೆರೆದ ಮ್ಯಾನ್‌ಹೋಲ್ ಸಮೀಪದ ಅಂಗಡಿ-ಮುಂಗಟ್ಟಿನವರು ಇದರಿಂದ ಆಕ್ರೋಶಿತರಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರಿನಿಂದ ವಿಶೇಷ ಯಂತ್ರ ತರಿಸಿ ಪೈಪ್‌ನಲ್ಲಿ ಸಿಕ್ಕಿಕೊಂಡ ತ್ಯಾಜ್ಯವನ್ನು ಖಾಲಿ ಮಾಡಲಾಯಿತು. ಒಟ್ಟಿನಲ್ಲಿ ವರ್ಷದಲ್ಲಿ 2ರಿಂದ 3 ಬಾರಿ ಮ್ಯಾನ್‌ಹೋಲ್ ಬಾಯ್ದೆರೆಯುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿಕನ್ ಅಂಗಡಿಯವರು ಈ ಹಿಂದೆಯೂ ತ್ಯಾಜ್ಯ ಹಾಕುತ್ತಿದ್ದರು. ಅವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಹಾಗಿದ್ದೂ ಮತ್ತೆ ತ್ಯಾಜ್ಯ ಹಾಕುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಇದು ದೃಢಪಟ್ಟರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹೇಳಿದ್ದಾರೆ.







