ಯುವ ಗಾಯಕಿ ಕ್ರಿಸ್ಟಿನಾ ಗ್ರಿಮ್ಮಿ ಗುಂಡಿಗೆ ಬಲಿ

ಓರ್ಲಾಂಡೊ, ಜೂ. 11: ಎನ್‌ಬಿಸಿ ಟೆಲಿವಿಶನ್ ಚಾನೆಲ್‌ನ ‘ದ ವಾಯ್ಸ’ ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ 22 ವರ್ಷದ ಗಾಯಕಿ ಕ್ರಿಸ್ಟಿನಾ ಗಿಮ್ಮಿಯನ್ನು ಅಮೆರಿಕದ ಫ್ಲೋರಿಡ ರಾಜ್ಯದ ಓರ್ಲಾಂಡೊದಲ್ಲಿರುವ ಸಂಗೀತ ಸಭಾಭವನವೊಂದರಲ್ಲಿ ದುಷ್ಕರ್ಮಿಯೊಬ್ಬ ಶುಕ್ರವಾರ ರಾತ್ರಿ ಗುಂಡು ಹಾರಿಸಿ ಕೊಂದಿದ್ದಾನೆ.
‘‘ಕ್ರಿಸ್ಟೀನಾ ಮೃತರಾಗಿದ್ದಾರೆ ಹಾಗೂ ದೇವರೊಂದಿಗೆ ಇರುವುದಕ್ಕಾಗಿ ತನ್ನ ಮೂಲ ಮನೆಗೆ ಹೋಗಿದ್ದಾರೆ ಎಂಬುದನ್ನು ನಾನು ಹೇಳಬಲ್ಲೆ’’ ಎಂದು ಗಾಯಕಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೆದರ್ ವಾಲ್ಶ್ ಶನಿವಾರ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ಪ್ಲಾಝಾ ಲೈವ್ ತಿಯೇಟರ್‌ನಲ್ಲಿ ಕಾರ್ಯಕ್ರಮ ನೀಡಿದ ಬಳಿಕ ಗ್ರಿಮ್ಮಿ ಮತ್ತು ಅವರ ‘ಬಿಫೋರ್ ಯು ಎಕ್ಸಿಟ್’ ತಂಡದ ಸದಸ್ಯರು ಸಭಿಕರಿಗೆ ಆಟೊಗ್ರಾಫ್ ನೀಡುತ್ತಿದ್ದರು. ಆಗ ವ್ಯಕ್ತಿಯೊಬ್ಬ ಆಕೆಯೆಡೆಗೆ ನಡೆಯುತ್ತಾ ಬಂದು ಗುಂಡು ಹಾರಿಸಿದನು.
ಆಕೆಯನ್ನು ಓರ್ಲಾಂಡೊ ರೀಜನಲ್ ಮೆಡಿಕಲ್ ಸೆಂಟರ್‌ಗೆ ಕರೆದುಕೊಂಡು ಹೋಗಲಾಯಿತಾದರೂ, ಅಲ್ಲಿ ಅವರು ಕೆಲವು ಗಂಟೆಗಳ ಬಳಿಕ ಕೊನೆಯುಸಿರೆಳೆದರು ಎಂದು ಓರ್ಲಾಂಡೊ ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
ಗ್ರಿಮ್ಮಿಯ ಸಹೋದರನು ಹಂತಕನನ್ನು ಎದುರಿಸಿ ನಿಂತಾಗ, ಎರಡು ಬಂದೂಕುಗಳನ್ನು ಹೊಂದಿದ್ದ ಹಂತಕ ತನಗೆ ತಾನೆ ಗುಂಡು ಹಾರಿಸಿ ಕೊಂದನು. ಬೇರೆ ಯಾರಿಗೂ ಗಾಯವಾಗಿಲ್ಲ. ಹಂತಕನನ್ನು ಪೊಲೀಸರು ಇನ್ನಷ್ಟೆ ಗುರುತಿಸಬೇಕಾಗಿದೆ.
ನ್ಯೂಜರ್ಸಿ ನಿವಾಸಿ ಗ್ರಿಮ್ಮಿ ‘ಯೂ ಟ್ಯೂಬ್’ ಕಲಾವಿದೆಯಾಗಿ ತನ್ನ ವೃತ್ತಿಜೀವನ ಆರಂಭಿಸಿದರು. ಅವರು 2014ರಲ್ಲಿ ಆರನೆ ಋತುವಿನ ‘ದ ವಾಯ್ಸಿ’ ರಿಯಲಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೂರನೆಯವರಾಗಿ ಹೊರಹೊಮ್ಮಿದರು.







