ಮುಟ್ಟತ್ತೋಡಿ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ: ಪ್ರಮುಖ ಆರೋಪಿ ಸೆರೆ
ನಕಲಿ ಚಿನ್ನಾಭರಣ ಅಡವಿಟ್ಟು ಕೋಟ್ಯಂತರ ರೂ. ಸಾಲ

ಕಾಸರಗೋಡು,ಜೂ.11: ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಕೋಟ್ಯಂತರ ರೂ.ಸಾಲ ಪಡೆದು ವಂಚನೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಮುಳ್ಳೇರಿಯ ಬಳಿಯ ಕುಂಟಾರು ಉಯಿತ್ತಡ್ಕದ ಯು.ಕೆ. ಹ್ಯಾರಿಸ್(37) ಬಂಧಿತ ಆರೋಪಿ. ಈತನ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿದ್ಯಾನಗರ ಸಿ.ಐ ಕೆ.ವಿ. ಪ್ರಮೋದನ್ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಪ್ರಕರಣದ ಇತರ ಇಬ್ಬರು ಆರೋಪಿಗಳು ಪೊಲೀಸರ ಬಲೆಗೊಳಗಾಗಿರುವುದಾಗಿಯೂ ತಿಳಿಯಲಾಗಿದೆ. ಬ್ಯಾಂಕನ ವಿದ್ಯಾನಗರ ಶಾಖೆಯ ಮೆನೇಜರ್ ಸಂತೋಷ್ ಕುಮಾರ್ ಮತ್ತು ಬ್ಯಾಂಕನ ಇನ್ನೋರ್ವ ಅಪ್ರೈಸರ್ ನೀಲೇಶ್ವರ ಪಳ್ಳಿಕ್ಕೆರೆ ಪರೋಳ್ ಇಲ್ಲತ್ತ್ ವಳಪಿನ ಟಿ.ವಿ. ಸತೀಶನ್ ಎಂಬವರನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಪೈಕಿ ಆರೋಪಿ ಸಂತೋಷ್ ಕುಮಾರನ ಪತ್ನಿ ರೇಖಾಳ ವಿರುದ್ಧ ಕೂಡಾ ಪೊಲೀಸರು ಕೇಸು ದಾಖಲಿಸಿ ಆಕೆಯನ್ನು ಬಂಧಿಸುವ ಸಾಧ್ಯತೆ ಇದೆ .ಆಕೆಯ ಹೆಸರಲ್ಲಿ ಸಂತೋಷ್ ಕುಮಾರ್ ಬ್ಯಾಂಕನಲ್ಲಿ 56 ಲಕ್ಷ ರೂ. ಠೇವಣಿ ಇರಿಸಿ, ಬಳಿಕ ಅದನ್ನು ಹಿಂಪಡೆದಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆ ಹಿನ್ನೆಲೆಯಲ್ಲಿ ಆಕೆಯ ವಿರುದ್ಧವೂ ಕೇಸು ದಾಖಲಿಸಲು ಪೊಲೀಸರು ಆಲೋಚಿಸುತ್ತಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಬ್ಯಾಂಕನ ಅಪ್ರೈಸರ್ ನೀಲೇಶ್ವರ ಪಳ್ಳಿಕ್ಕೆರೆ ಪರೋಳ್ ಇಲ್ಲತ್ತ್ ವಲಪ್ಪಿನ ಟಿ.ವಿ. ಸತ್ಯಪಾಲನ್(41) ನಕಲಿ ಒಡವೆಗಳಿಗೆ ನಕಲಿ 916 ಹಾಲ್ ಮಾರ್ಕ್ ಮೊಹರು ನಮೂದಿಸಿದ ಆರೋಪದಂತೆ ಭೀಮನಡಿ ಕುವಾರಲಾಲ್ ಪರಂಬಿಲ್ ಕೆ. ಜಯ ರಾಜನ್(43), ಬ್ಯಾಂಕ್ ವ್ಯವಹಾರಗಾರ ಚೆಂಗಳ ನಾಲ್ಕನೇ ಮೈಲು ಹಸೀನಾ ಮಂಜಿಲನ ಕೆ. ಅಬ್ದುಲ್ ಮಜೀದ್(29) ಎಂಬವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದು, ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ಹೊರತಾಗಿ ಇನ್ನೂ 50ರಷ್ಟು ಆರೋಪಿಗಳು ಈ ವಂಚನೆಯಲ್ಲಿ ಶಾಮೀಲಾಗಿದ್ದು ಅವರ ಪತ್ತೆಗಾಗಿ ಪೊಲೀಸರು ಕೇರಳದ ವಿವಿಧೆಡೆಗಳಲ್ಲಿ ಮಾತ್ರವಲ್ಲದೆ ಕರ್ನಾಟಕ ಮತ್ತು ಗೋವಾಕ್ಕೂ ತನಿಖೆ ವಿಸ್ತರಿಸಿದ್ದಾರೆ.
ನಿನ್ನೆ ಬಂಧಿತನಾದ ಯು.ಕೆ. ಹ್ಯಾರಿಸನ ಮನೆಗೆ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಅಲ್ಲಿಂದಲೂ ಸುಮಾರು ಅರ್ಧ ಕಿಲೋದಷ್ಟು ನಕಲಿ ಚಿನ್ನದ ಒಡವೆಗಳು ಹಲವರ ಹೆಸರಲ್ಲಿ ವಿವಿಧ ಅಂಗಡಿಗಳಿಂದ ಖರೀದಿಸಲಾದ ನಕಲಿ ಒಡವೆಗಳ 30 ರಶೀದಿಗಳನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈತ ಬ್ಯಾಂಕನ ಪ್ರಧಾನ ಶಾಖೆ ಮತ್ತು ವಿದ್ಯಾನಗರ ಶಾಖೆಯಲ್ಲೂ ಖಾತೆ ಹೊಂದಿರುವುದಾಗಿಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.







