ಪುತ್ತೂರು: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; ಇಬ್ಬರ ಸೆರೆ

ಪುತ್ತೂರು, ಜೂ.11: ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ನಿಧಿ ಮುಂಡ ಸಮೀಪ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಟರ್ಪಾಲಿನ ಶೆಡ್ ರಚಿಸಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಸಂಪ್ಯ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಪೊಲೀಸರು ಶುಕ್ರವಾರ ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಅಬ್ದುರ್ರಶೀದ್ ಮತ್ತು ಬರೆಪ್ಪಾಡಿಯ ಗುರುವ ಬಂಧಿತ ಆರೋಪಿಗಳು. ಜುಗಾರಿ ಆಟಕ್ಕೆ ಬಳಸಲಾದ 5,010 ರೂ.ವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
ಮಾಡ್ನೂರು ಗ್ರಾಮದ ನಿಧಿಮುಂಡ -ಕುಂಞಿಕುಮೇರು ಎಂಬಲ್ಲಿನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಟರ್ಪಾಲಿನ ಶೆಡ್ ನಿರ್ಮಿಸಿಕೊಂಡು ಜುಗಾರಿ ಅಡ್ಡೆ ನಡೆಸುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಈಶ್ವರಮಂಗಲ ಹೊರ ಠಾಣೆಯ ಎಎಸ್ಸೈ ವಿಠಲ ಶೆಟ್ಟಿ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ವಿನಯಕುಮಾರ್ ಮತ್ತು ಹನುಮಂತ ಜುಗಾರಿ ಅಡ್ಡೆಗೆ ದಾಳಿ ನಡೆಸಿದ್ದರು.
ಪೊಲೀಸರ ದಾಳಿಯ ವೇಳೆ ಆಟದಲ್ಲಿ ನಿರತರಾಗಿದ್ದ ಎಂಟು ಮಂದಿಯಲ್ಲಿ ಆರು ಮಂದಿ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿದು ಬಂದಿದೆ.







