ಪುತ್ತೂರು: ರಿಕ್ಷಾ ಚಾಲಕರಿಬ್ಬರ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಪುತ್ತೂರು, ಜೂ. 11: ರಿಕ್ಷಾ ಚಾಲಕರಿಬ್ಬರ ಮೇಲೆ ತಂಡವೊಂದು ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ನಡೆದಿದ್ದು, ಗಾಯಾಳು ರಿಕ್ಷಾ ಚಾಲಕರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸವಣೂರು ಗ್ರಾಮದ ಕುಕ್ಕುಜೆ ನಿವಾಸಿ ಉಮ್ಮರ್ ಎಂಬವರ ಪುತ್ರ ಆಸೀಫ್ (22) ಮತ್ತು ಇಬ್ರಾಹೀಂ ಎಂಬವರ ಪುತ್ರ ಖಲಂದರ್(24) ಹಲ್ಲೆಗೊಳಗಾದವರು. ಸ್ಥಳೀಯರಾದ ಪೂವಣಿ ಗೌಡ, ಅವರ ಪುತ್ರ ಪ್ರಸಾದ್, ಶಿವಣ್ಣ ಗೌಡ ಇಡ್ಯಾಡಿ ಮತ್ತು ಧರ್ಣಪ್ಪ ಗೌಡ ಇಡ್ಯಾಡಿ ಸೇರಿದಂತೆ ತಂಡವೊಂದು ತಮ್ಮನ್ನು ರಿಕ್ಷಾದಿಂದ ಎಳೆದು ಹಾಕಿ ತಲವಾರಿನಿಂದ ಹಲ್ಲೆ ನಡೆಸಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.
ಇಡ್ಯಾಡಿ ನಿವಾಸಿ ಮೋನಪ್ಪ ಗೌಡ ಎಂಬವರು ತನ್ನನ್ನು ಬಾಡಿಗೆಗೆಂದು ಮನೆಯ ಕಡೆಗೆ ಕರೆದೊಯ್ದಿದ್ದರು. ಅದರಂತೆ ಅಲ್ಲಿಗೆ ಹೋಗಿದ್ದಾಗ ಮನೆಯ ಪಕ್ಕದ ಕಾಲುದಾರಿಯ ಬಳಿಯಲ್ಲಿ ರಿಕ್ಷಾ ನಿಲ್ಲಿಸಿದ ಮೋನಪ್ಪ ಗೌಡರು ಬಾಡಿಗೆ ಹಣ ತಂದು ಕೊಡುತ್ತೇನೆ ಎಂದು ಮನೆಗೆ ಹೋಗಿದ್ದರು. ನಾನು ರಿಕ್ಷಾದಲ್ಲಿಯೇ ಕುಳಿತು ಅವರನ್ನು ಕಾಯುತ್ತಿದ್ದೆ. ಅಲ್ಲಿಗೆ ಆಗಮಿಸಿದ ಪೂವಣಿ ಗೌಡ, ನಾನು ನಿಂತಿರುವುದನ್ನು ಪ್ರಶ್ನಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಅವರಿಂದ ತಪ್ಪಿಸಿಕೊಂಡು ಬಂದ ನಾನು ಮಸೀದಿಗೆ ಬಂದಿದ್ದು, ಬಳಿಕ ಹಿಂತಿರುಗಿ ಹೋಗುವ ವೇಳೆಗೆ ನನ್ನೊಂದಿಗೆ ಖಲಂದರ್ ಅವರೂ ಇನ್ನೊಂದು ರಿಕ್ಷಾದಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ನಮ್ಮ ರಿಕ್ಷಾವನ್ನು ದೂಡಿ ಹಾಕಿದ ಆರೋಪಿಗಳ ತಂಡ ತಲವಾರಿನಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







