ಜೆಡಿಎಸ್‌ನಲ್ಲೇ ಇರುತ್ತೇನೆ, ಪಕ್ಷ ಕಟ್ಟುತ್ತೇನೆ: ಬಿ.ಎಂ. ಫಾರೂಕ್

ಬೆಂಗಳೂರು, ಜೂ.11: ರಾಜ್ಯಸಭಾ ಚುನಾವಣೆಯ ಸೋಲು ಗೆಲುವಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಜೆಡಿಎಸ್‌ನಲ್ಲೇ ಇದ್ದು ಪಕ್ಷವನ್ನು ಕಟ್ಟುತ್ತೇನೆ ಎಂದು ಜೆಡಿಎಸ್‌ನ ರಾಜ್ಯಸಭಾ ಅಭ್ಯರ್ಥಿ ಬಿ.ಎಂ. ಫಾರೂಕ್ ಹೇಳಿದ್ದಾರೆ.
ರಾಜ್ಯಸಭಾ ಚುನಾವನಾ ಸಂಬಂಧಿ ಬೆಳವಣಿಗೆಗಳ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸೋಲು ಗೆಲುವು ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಜಕೀಯದಲ್ಲಿ ಸೋಲು ಗೆಲುವು ಇದ್ದದ್ದೇ. ಮುಂದೆ ಹೋದ ಮೇಲೆ ಹಿಂದೆ ಬರುವ ಪ್ರಶ್ನೆಯೇ ಇಲ್ಲ. ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಇಲ್ಲೇ ಇದ್ದು ಪಕ್ಷವನ್ನು ಕಟ್ಟುತ್ತೇನೆ ಎಂದು ಹೇಳಿದರು.
ಜೆಡಿಎಸ್‌ನಲ್ಲಿ ಗೆಲ್ಲುವ ಎಲ್ಲಾ ಅವಕಾಶಗಳಿತ್ತು. ಎಲ್ಲರೂ ಮತ ಹಾಕುತ್ತಾರೆ ಎಂದು ಭರವಸೆ ಇಟ್ಟುಕೊಂಡಿದ್ದೆ. 40 ಜೆಡಿಎಸ್ ಶಾಸಕರು ಮತ್ತು 12 ಪಕ್ಷೇತರ ಶಾಸಕರು ಮತ ಹಾಕುವ ವಿಶ್ವಾಸವಿತ್ತು. ಎಲ್ಲರೂ ಮತ ಹಾಕುತ್ತಾರೆ ಎಂದು ಜೆಡಿಎಸ್ ನಾಯಕರು ಭರವಸೆ ನೀಡಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳು ನನಗೆ ಬೇಸರ ತರಿಸಿವೆ. ಸೋಲು ಮತ್ತು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಜೆಡಿಎಸ್‌ನಲ್ಲೇ ಇದ್ದು ಪಕ್ಷ ಸಂಘಟಿಸುತ್ತೇನೆ. ಕಾಂಗ್ರೆಸ್‌ನಲ್ಲಿ ಮೂರನೇ ಅಭ್ಯರ್ಥಿಗೆ ಅಗತ್ಯವಾದ ಸಂಖ್ಯೆ ಇರಲಿಲ್ಲ. ಹಾಗಾಗಿ ನಾನು ಕಾಂಗ್ರೆಸ್‌ನ್ನು ಸಂಪರ್ಕಿಸಿರಲಿಲ್ಲ ಎಂದು ಹೇಳಿದರು.







