ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪ್ರದಾನ ಕಾರ್ಯಕ್ರಮ

ಮಂಗಳೂರು, ಜೂ.11: ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜಿನ 550 ವಿದ್ಯಾರ್ಥಿಗಳಿಗೆ ಇಂದು ಕಾಲೇಜಿನ ಸಭಾಂಗಣದಲ್ಲಿ ಇನ್ಫೋಸಿಸ್‌ನ ಸಹಾ ಉಪಾಧ್ಯಕ್ಷ ಬ್ರಿಜೆಶ್ ಕೃಷ್ಣನ್ ಪದವಿ ಪ್ರಮಾಣಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಗೌರವಿಸುವುದು, ಹಿರಿಯರನ್ನು ಗೌರವಿಸುವುದು ಮತ್ತು ತನ್ನನ್ನು ಮರೆಯದಿರುವ ಕಾರ್ಯವನ್ನು ಮಾಡಿದರೆ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಂಡಾರಿ ಫೌಂಡೇಶನ್‌ನ ಅಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಸಹ್ಯಾದ್ರಿ ಕಾಲೇಜಿನಲ್ಲಿನ ಹಿಂದಿನ ವಿದ್ಯಾರ್ಥಿಗಳು ಮಾಡಿದ ಸಾಧನೆ ಮತ್ತು ಕಾರ್ಯನಿರ್ವಹಿಸಿದ ಕಂಪೆನಿಗಳಲ್ಲಿ ತೋರಿಸಿದ ಬದ್ದತೆಯಿಂದ ಈ ಬಾರಿ ಸಹ್ಯಾದ್ರಿ ಕಾಲೇಜಿನಲ್ಲಿ 150 ಕಂಪೆನಿಗಳು ವಿದ್ಯಾರ್ಥಿಗಳನ್ನು ಸಂದರ್ಶಿಸಿದೆ.
ಈ ಬಾರಿ 400 ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಹೊರತೆರಳುವಾಗಲೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳಿಗೆ 3 ರಿಂದ 5 ಕಂಪೆನಿಗಳಲ್ಲಿ ಉದ್ಯೋಗದ ಅವಕಾಶ ಸಿಕ್ಕಿದೆ. ಹಿಂದಿನ ವಿದ್ಯಾರ್ಥಿಗಳು ತೋರಿಸಿದ ಬದ್ದತೆಯನ್ನು ವಿದ್ಯಾರ್ಥಿಗಳು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜಿನ ಅಕಾಡೆಮಿಕ್ ಡೀನ್ ಪ್ರೊ.ಉಮಾಶಂಕರ್, ಪ್ರೋ. ಮಹೇಶ್ ಬಿ.ದಾವಣಗೆರೆ, ಡಾ.ಜೋಶ್ ಅಲೆಕ್ಸ್ ಮ್ಯಾಥ್ಯು, ಪ್ರೊ.ಸುಧೀರ್ ಶೆಟ್ಟಿ, ಡಾ.ಮನು ಎ.ಪಿ, ಪ್ರೊ.ಉಮೇಶ್ ಎಸ್ ಎಸ್ ಉಪಸ್ಥಿತರಿದ್ದರು.
ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜಿನ ಉಪಪ್ರಾಂಶುಪಾಲ ಬಾಲಕೃಷ್ಣ ಎಸ್ ಸ್ವಾಗತಿಸಿದರು, ಪ್ರಾಂಶುಪಾಲ ಡಾ.ಯು.ಎಂ.ಭೂಷಿ ವಂದಿಸಿದರು.







