ಕೊಳೆತ ತ್ಯಾಜ್ಯದಿಂದ ನೆಕ್ಕಿಲಾಡಿ ಸಂತೆಕಟ್ಟೆ ಪರಿಸರದಲ್ಲಿ ಡೆಂಗ್ ಭೀತಿ

ನೆಕ್ಕಿಲಾಡಿ, ಜೂ.11: 34 ನೆಕ್ಕಿಲಾಡಿ ಸಂತೆಕಟ್ಟೆ ಹಿಂಬದಿ ಕಸ, ಕೊಳೆತ ತರಕಾರಿ ತ್ಯಾಜ್ಯ ವಿಲೇವಾರಿ ಆಗದೆ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದರಿಂದ ಪರಿಸರದ ಜನರಿಗೆ ಡೆಂಗ್, ಮಲೇರಿಯಾದಂತಹ ರೋಗಗಳು ಹರಡುವ ಭಯ ಕಾಡತೊಡಗಿದೆ.
ಸಂತೆಕಟ್ಟೆ ವ್ಯಾಪ್ತಿಯಲ್ಲಿನ ಈ ತ್ಯಾಜ್ಯದಿಂದಾಗಿ ದುರ್ವಾಸನೆ ಬರುತ್ತಿದ್ದು, ತ್ಯಾಜ್ಯವು ಸಮರ್ಪಕ ವಿಲೇವಾರಿ ಆಗದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಸಂತೆಕಟ್ಟೆ ಪರಿಸರದ ಜನರು ಆರೋಪಿಸಿದ್ದಾರೆ.
ಅನೇಕ ಬಾರಿ 34ನೆ ನೆಕ್ಕಿಲಾಡಿ ನಾಗರಿಕ ಅಭಿವೃದ್ಧಿ ಸಮಿತಿಯು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೂಕ್ತ ಕಸ ವಿಲೇವಾರಿಗೆ ಮನವಿ ನೀಡಿತ್ತು. ಆದರೆ ಒಂದೆರಡು ಬಾರಿ ಮಾತ್ರ ಕಸ ವಿಲೇವಾರಿ ಮಾಡಲಾಗಿದ್ದು, ಮತ್ತೆ ಅದೇ ಸಮಸ್ಯೆ ಮುಂದುವರೆದಿದೆ.
ಸ್ವಚ್ಛ ಗ್ರಾಮ ಪ್ರಶಸ್ತಿಗೆ ಪಾತ್ರವಾಗಿದ್ದ 34ನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಇಂದು ಅಸ್ವಚ್ಛತೆಯಿಂದ ಕೂಡಿದೆ. ಸಂತೆಕಟ್ಟೆ ನಿವಾಸಿಗಳ ಬವಣೆಯನ್ನು ಅರಿತು, ಕೊಳೆತು ನಾರುತ್ತಿರುವ ಈ ತ್ಯಾಜ್ಯಗಳ ಸಮರ್ಪಕ ವಿಲೇವಾರಿಗೆ ಇನ್ನಾದರೂ ಗ್ರಾಮ ಪಂಚಾಯತ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೆಕಟ್ಟೆ ಪರಿಸರವು ಸಂಪೂರ್ಣವಾಗಿ ತ್ಯಾಜ್ಯದಿಂದ ಕೂಡಿದ್ದು, ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಪಂಚಾಯತ್ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಪುತ್ತೂರು ತಾಲೂಕಿನಾದ್ಯಂತ ಡೆಂಗ್ ವ್ಯಾಪಕವಾಗಿ ಹರಡುತ್ತಿದೆ. 34ನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಕೂಡ ಡೆಂಗ್ ಜಾಗೃತಿ ಬಗ್ಗೆ ಕರಪತ್ರ ಹಂಚುತ್ತಿದೆಯಾದರೂ ತನ್ನದೇ ಗ್ರಾಮದಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಸಂತೆಕಟ್ಟೆ ವ್ಯಾಪ್ತಿಯಲ್ಲಿನ ತ್ಯಾಜ್ಯದಿಂದ ಮಾರಕ ರೋಗಗಳು ಉತ್ಪತ್ತಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.
-ಅಬ್ದುರ್ರಹ್ಮಾನ್ ಯುನಿಕ್, ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟಗಾರ.







