ಪುತ್ತೂರು:ಐತಿಹಾಸಿಕ ಅಜಲಾಡಿಕಟ್ಟೆ ಕೆರೆಯನ್ನು ಉಳಿಸಲು ಪಂಚಾಯತ್ ನಿರ್ಧಾರ
ಕೆರೆ ಅತಿಕ್ರಮಣ ವಿರುದ್ದ ಎ.ಸಿಗೆ ದೂರು ನೀಡಲು ತೀರ್ಮಾನ

ಪುತ್ತೂರು, ಜೂ.11: ಆರ್ಯಾಪು ಗ್ರಾಮದ ಅಜಲಾಡಿ ಕಟ್ಟೆ ಕರೆಯನ್ನು ಉಳಿಸುವ ನಿಟ್ಟಿನಲ್ಲಿ ಆರ್ಯಾಪು ಗ್ರಾಮ ಸಭೆಯಲ್ಲಿ ನಿರ್ಧಾರವೊಂದನ್ನು ಕೈಗೊಂಡಿದ್ದು, ಕೆರೆಯನ್ನು ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಪುತ್ತೂರು ಸಹಾಯಕ ಕಮೀಷನರ್‌ಗೆ ದೂರು ನೀಡಲು ನಿರ್ಣಯಿಸಿದ್ದಾರೆ.
ಆರ್ಯಾಪು ಗ್ರಾಪಂ ಸಾಮಾನ್ಯ ಸಭೆಯು ಅಧ್ಯಕ್ಷೆ ಗೀತಾರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆದು ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಮೇಶ್ ರೈ ಡಿಂಬ್ರಿ, ಅಜಲಾಡಿ ಕಟ್ಟೆ ಕೆರೆಯು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಸುಮಾರು. 3.52 ಎಕ್ರೆ ವಿಸ್ತೀರ್ಣವನ್ನು ಹೊಂದಿರುವ ಕೆರೆ ಜನತೆಯ ಹಿಂದೆ ಊರಿನ ಜೀವನಾಡಿಯಾಗಿತ್ತು. ಆದರೆ ಕ್ರಮೇಣ ಕೆರೆಯ ಅತಿಕ್ರಮಣ ನಡೆಯುತ್ತಾ ಬಂದು ಇದೀಗ ಕೆರೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕರೆಯನ್ನು ಉಳಿಸಿ ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಈ ಕುರಿತು ಗ್ರಾಪಂ ವತಿಯಿಂದ ಸಂಬಂಧಿಸಿದ ಇಲಾಖೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಐತಿಹಾಸಿಕ ಕೆರೆ ಮಣ್ಣು ಪಾಲಾಗದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ಸಂದಭರ್ದಲ್ಲಿ ಮಾತನಾಡಿದ ತಾಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಅಜಲಾಡಿ ಕಟ್ಟೆ ಕೆರೆಯ ಕುರಿತು ಈ ಹಿಂದೆ ತಾಪಂ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಕೆರೆಯನ್ನು ಹೇಗೆ ಉಳಿಸಿಕೊಳ್ಳುವುದು ಮತ್ತು ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವ ಕುರಿತು ಪುತ್ತೂರು ಸಹಾಯಕ ಕಮೀಷನರ್‌ಗೆ ಬರೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಕೆರೆಯನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಯಿತು.
ಮಳೆ ಆರಂಭವಾದೊಡನೆ ಅಲ್ಲಲ್ಲಿ ಡೆಂಗ್ ಮತ್ತು ಮಲೇರಿಯಾ ಜ್ವರಗಳು ಕಾಣಿಸಿಕೊಂಡಿದ್ದು ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಫಾಗಿಂಗ್ ಮಾಡಲು ತೀರ್ಮಾನವನ್ನು ಮಾಡಲಾಯಿತು. ಗ್ರಾಮದಲ್ಲಿ ಕೆಲವರಿಗೆ ಕಳೆದ ಕೆಲವು ದಿನಗಳ ಹಿಂದೆ ಡೆಂಗ್ ಕಾಣಿಸಿಕೊಂಡಿದ್ದು ಈಗ ಅವರು ಗುಣಮುಖರಾಗಿದ್ದಾರೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಫಾಗಿಂಗ್ ಮಾಡುವುದು ಮತ್ತು ನೈರ್ಮಲ್ಯದ ಕುರಿತು ಗ್ರಾಮಸ್ಥರಿಗೆ ತಿಳುವಳಿಕೆ ನೀಡುವ ಕುರಿತು ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಯಿತು.
ಉಪಾಧ್ಯಕ್ಷ ವಸಂತ, ಕಾರ್ಯದರ್ಶಿ ಪದ್ಮಾಕುಮಾರಿ, ಪಿಡಿಒಜಗದೀಶ್ ನ್‌ಕಾ, ಸದಸ್ಯರಾದ ವಿಶ್ವನಾಥ ಗೌಡ, ಗಣೇಶ್ ರೈ, ರೇಖನಾಥ ರೈ, ಇಸ್ಮಾಯಿಲ್ ಮಲಾರು, ವಿನಯ, ಬಾರತಿ. ಎಸ್, ತುಳಸಿ ದೇರಣ್ಣ, ಸುಧಾಮಣಿ ಜೆ ರೈ, ವನಿತಾ, ಸವಿತಾ, ಕುಸುಮಾ, ಜಯಂತಿ, ಸುಂದರ ಮತ್ತು ಆಶಾ ಉಪಸ್ಥಿತರಿದ್ದರು.







