ಪುತ್ತೂರು: ಧಾರ್ಮಿಕ ಕ್ಷೇತ್ರಗಳ ಭೂ ಆಸ್ತಿಯನ್ನು ಸಕ್ರಮಗೊಳಿಸಲು ಮನವಿ
ಪುತ್ತೂರು, ಜೂ.11: ರಾಜ್ಯದಲ್ಲಿರುವ ಧಾರ್ಮಿಕ ಕ್ಷೇತ್ರಗಳ ಭೂ ಆಸ್ತಿ ಸಕ್ರಮಗೊಳಿಸುವಂತೆ ಕಂದಾಯ ಇಲಾಖೆಯ ರಾಜ್ಯ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮದ್ವರಾಜ್ ಅವರಿಗೆ ಪುತ್ತೂರು ತಾಲೂಕಿನ ಕೊಯ್ಲ ಮಾದರಿ ಗ್ರಾಮ ವಿಕಾಸ ಕೇಂದ್ರದ ಸಂಘಟಕ ಬಡಿಲ ಹುಸೈನ್, ಮಾಜಿ ತಾ.ಪಂ ಸದಸ್ಯ ಧರ್ಮಪಾಲ ರಾವ್ ರಾಮಕುಂಜ ಮತ್ತು ಇಳಂತಿಲ ಗ್ರಾ.ಪಂ ಅಧ್ಯಕ್ಷ ಯು.ಕೆ. ಇಸುಬು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿನ ಕೆಲವೊಂದು ಧಾರ್ಮಿಕ ಕ್ಷೇತ್ರಗಳಾದ ದೇವಸ್ಥಾನ, ಮಂದಿರ, ಚರ್ಚ್, ಮಸೀದಿ, ಮದ್ರಸ, ದರ್ಗಾ, ಈದ್ಗಾ ಮತ್ತು ದಫನ ಭೂಮಿ ಅನಾದಿ ಕಾಲದಿಂದಲೂ ಸರಕಾರಿ ಜಮೀನಿನಲ್ಲಿದೆ. ಇಂತಹ ಭೂಮಿಯನ್ನು ಅಕ್ರಮ ಸಕ್ರಮ, 94/ಸಿ ಯೋಜನೆ ಅಡಿಯಲ್ಲಿ ಸಕ್ರಮಗೊಳಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕೆಲವೊಂದು ಕಡೆಗಳಲ್ಲಿ ಧಾರ್ಮಿಕ ಕ್ಷೇತ್ರದ ಜಮೀನು ರಾಜರ ಆಡಳಿತ ಕಾಲದಿಂದಲೂ ಸ್ವಾಧೀನ ಹೊಂದಿದ್ದರೂ, ಧಾರ್ಮಿಕ ಕ್ಷೇತ್ರದ ಹೆಸರಿನಲ್ಲಿ ಹಕ್ಕು ಪತ್ರ ಪಡೆದುಕೊಳ್ಳಲು ಭೂ ಕಂದಾಯ ಕಾಯ್ದೆಯಂತೆ ಕಷ್ಟಕರವಾಗಿದೆ.
ಈ ಹಿನ್ನೆಲೆಯಲ್ಲಿ ಸರಕಾರಿ ಜಮೀನು ಅಕ್ರಮ ಮಾಡಿದವರಿಗೆ ಈ ಹಿಂದೆ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಹಾಗೂ ಸರಕಾರಿ ಜಮೀನಿನಲ್ಲಿ ವಾಸಿಸುತ್ತಿರುವವರಿಗೆ 94ಸಿಯಡಿಯಲ್ಲಿ ಮಂಜೂರುಗೊಳಿಸಿದಂತೆ ಈಗಿರುವ ಧಾರ್ಮಿಕ ಕಾನೂನಿಗೆ ತಿದ್ದುಪಡಿ ತಂದು, ಧಾರ್ಮಿಕ ಕ್ಷೇತ್ರಗಳ ಸ್ವಾಧೀನವಿರುವ ಜಮೀನನ್ನು ಗ್ರಾಮವಾರು ಭೂ ಮಾಪನ ಇಲಾಖೆ ಮೂಲಕ ಅಳತೆ ನಡೆಸಿ ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.







