ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ
ರಾಜ್ಯಸಭಾ ಚುನಾವಣೆ

ಬೆಂಗಳೂರು, ಜೂ.11: ರಾಜ್ಯಸಭೆ ಚುನಾವಣೆಯಲ್ಲಿ ಜಯಗಳಿಸಿರುವ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಅವರ ಗೆಲುವಿಗೆ ಕಾರಣರಾದ ಎಲ್ಲ ಶಾಸಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಗಳು ಎಲ್ಲ ಮತದಾರ(ಶಾಸಕರು)ರನ್ನು ಭೇಟಿ ಯಾಗಿ ಮತಯಾಚಿಸಿದ್ದರು. ಪಕ್ಷದ ಶಾಸಕರ ಜೊತೆಗೆ ಪಕ್ಷೇತರರು ಹಾಗೂ ಜೆಡಿಎಸ್ ಶಾಸಕರು ಮತ ನೀಡಿ ದ್ದಾರೆ ಎಂದು ಅವರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸಿದರು.
ಅವರೆಲ್ಲರೂ, ಸರಕಾರ ಹಾಗೂ ಪಕ್ಷದ ಮೇಲೆ ನಂಬಿಕೆಯಿಟ್ಟು ಮತ ಹಾಕಿದ್ದಾರೆ. ಸರಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ನೋಡಿ ಬೆಂಬಲ ನೀಡಿದ್ದಾರೆ. ನಾವು ನೀಡಿದ ಸೂಚನೆ ಪ್ರಕಾರ ನಮ್ಮ ಶಾಸಕರು ಮತದಾನ ಮಾಡಿದ್ದಾರೆ. ಹೀಗಾಗಿ ಆ ಎಲ್ಲ ಶಾಸಕರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಪಕ್ಷದ ಗೆಲುವಿಗಾಗಿ ಶ್ರಮಿಸಿದ ಸಚಿವರು, ಸಂಸದರು, ಹೈಕಮಾಂಡ್ ನಾಯಕರು ಹಾಗೂ ವೀಕ್ಷಕರಿಗೂ ಇದೇ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದ ಸಿದ್ದರಾಮಯ್ಯ, ಮೂರನೆ ಅಭ್ಯರ್ಥಿಯ ಗೆಲುವಿಗೆ ನಮಗೆ ಮತಗಳ ಕೊರತೆಯಿತ್ತು. ಆದರೂ, ಗೆಲುವು ಸಾಧಿಸಿದ್ದೇವೆ ಎಂದು ಅವರು ತಿಳಿಸಿದರು.
ಜೆಡಿಎಸ್‌ನವರು ನಮ್ಮ ಮೇಲೆ ಮಾಡಿರುವ ಆರೋಪ ಆಧಾರರಹಿತ. ಇಂದು ರಾಜ್ಯದಲ್ಲಿ ಏನಾದರೂ ಅನೈತಿಕ ರಾಜಕಾರಣ ಪ್ರಾರಂಭವಾಗಿದ್ದರೆ, ಅದಕ್ಕೆ ಜೆಡಿಎಸ್‌ನವರೇ ಕಾರಣ. ಅದೇ ಅವರಿಗೆ ತಿರುಗುಬಾಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವ ಡಿ.ಕೆ.ಶಿವಕುಮಾರ್ ಚುನಾವಣಾ ಏಜೆಂಟ್‌ಆಗಿದ್ದಕ್ಕೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ , ಹತಾಶೆ ಗೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನು ರೀತಿಯಲ್ಲಿ ಅವರು ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾವು ಯಾವುದೇ ಆಮಿಷಗಳನ್ನು ವೊಡ್ಡಿಲ್ಲ. ಜೆಡಿಎಸ್ ಶಾಸಕರನ್ನು ಸೆಳೆದಿಲ್ಲ. ಯಾವುದೇ ರೀತಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಜೆಡಿಎಸ್ ಆಂತರಿಕ ಭಿನ್ನಾಭಿಪ್ರಾಯಗಳ ಕಾರಣ ಜೆಡಿಎಸ್ ಶಾಸಕರು ನಮ್ಮ ಮೇಲೆ ವಿಶ್ವಾಸವಿಟ್ಟು, ಸ್ವಇಚ್ಛೆಯಿಂದ ನಮಗೆ ಮತ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಸಿಎಂಗೆ ಹೊಸ ಕಾರು
ಬೆಂಗಳೂರು, ಜೂ. 11: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುಮಾರು 35ಲಕ್ಷ ರೂ. ಮೊತ್ತದ ಹೊಸ ಫಾರ್ಚೂನರ್ ಹೈಎಂಡ್-2016 ಮಾಡೆಲ್‌ನ ಬಿಳಿ ಬಣ್ಣದ ಕಾರನ್ನು ಖರೀದಿಸಲಾಗಿದೆ.
ಶನಿವಾರ ಮಧ್ಯಾಹ್ನದ ಸುಮಾರಿಗೆ ಮುಖ್ಯಮಂತ್ರಿಗಳ ಹೊಸಕಾರು ಕುಮಾರ ಕೃಪಾದಲ್ಲಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ನಿಲ್ಲಿಸಲಾಗಿದೆ. ಶೀಘ್ರದಲ್ಲೆ ಕಾರಿಗೆ ನೋಂದಣಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಚಾರಕ್ಕೆ ಬಳಸಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.







