ಜೂ.28ರಂದು ಪ್ರತಿಭಟನಾ ಸಮಾವೇಶ: ಪುಟ್ಟಣ್ಣಯ್ಯ
ತೆಂಗು, ಅಡಿಕೆ ಬೆಲೆ ನಿಗದಿಗೆ ಆಗ್ರಹಿಸಿ

ಬೆಂಗಳೂರು, ಜೂ.11: ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಕನಿಷ್ಠ ಬೆಲೆಗಾಗಿ ಸ್ಥಿರ ಬೆಲೆ ನೀತಿಯನ್ನು ಜಾರಿ ಮಾಡಿ, ರೈತರನ್ನು ಉಳಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜೂ.28 ರಂದು ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ. ಎಸ್.ಪುಟ್ಟಣ್ಣಯ್ಯ, ಕಳೆದ ವರ್ಷ ಒಂದು ಟನ್ ಕೊಬ್ಬರಿಗೆ 22 ಸಾವಿರ ಬೆಲೆಯಿತ್ತು, ಆದರೆ, ಇದೀಗ ಸಂಪೂರ್ಣವಾಗಿ ಕುಸಿದಿದ್ದು 10-11 ಸಾವಿರಕ್ಕೆ ಮಾರಾಟವಾಗುತ್ತಿದೆ. ಒಂದು ಕ್ವಿಂಟಾಲ್ ಅಡಿಕೆಯು 90 ಸಾವಿರಕ್ಕೆ ಮಾರಾಟವಾಗುತ್ತಿತ್ತು, ಆದರೆ, ಈಗ 36 ರಿಂದ 38 ಸಾವಿರಕ್ಕೆ ಮಾರಾಟವಾಗುತ್ತಿದೆ. ಒಂದು ಕಡೆ ತೆಂಗಿನ ಮರಗಳು ನುಸಿ ರೋಗಹಾಗೂ ಅಡಿಕೆ ಬೆಳೆ ಕೊಳೆ ಮತ್ತು ಹಳದಿ ರೋಗಗಳಿಗೆ ತುತ್ತಾಗುತ್ತಿವೆ. ಇಂತಹ ಸಂದರ್ಭ ದಲ್ಲಿಯೂ ರೈತರು ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಬೆಳೆದ ಬೆಳೆಗೆ ಕನಿಷ್ಠ ಬೆಲೆಯೂ ಸಿಗದೆ ಆತಂಕಕ್ಕೆ ಈಡಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 12 ಜಿಲ್ಲೆಗಳ ಸುಮಾರು 12.20 ಲಕ್ಷ ಹೆಕ್ಟೇರ್‌ನಲ್ಲಿ 12 ಕೋಟಿಗೂ ಅಧಿಕ ತೆಂಗಿನ ಮರಗಳನ್ನು ಬೆಳೆಯಲಾಗಿದೆ. ಇದೇ ಸಂದರ್ಭ ದಲ್ಲಿ ಅಷ್ಟೇ ಪ್ರಮಾಣದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾ ಗುತ್ತಿದೆ. ಕಳೆದೆರಡು ವರ್ಷಗಳಿಂದ ಸತತವಾದ ಬರಗಾಲದಿಂದ ನೀರಿಲ್ಲದೆ ಕೋಟ್ಯಂತರ ತೆಂಗು ಮತ್ತು ಅಡಿಕೆ ಮರಗಳು ನಾಶವಾಗಿವೆ. ಹೀಗಿದ್ದರೂ, ಸರಕಾರಗಳು ತೆಂಗು ಮತ್ತು ಅಡಿಕೆ ಬೆಳೆಗಾರರನ್ನು ಕಡೆಗಣಿಸಿವೆ ಎಂದು ಹೇಳಿದ ಅವರು, ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಲಿಕ್ಕಾಗಿ ಸಮಿತಿಗಳು ಬರುತ್ತವೆಯಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.
ಬೆಳೆಗಾರರನ್ನು ಒಳಗೊಂಡಂತೆ ವರ್ತಕರು, ಮಾರುಕಟ್ಟೆಯ ಅಧಿಕಾರಿಗಳು ಹಾಗೂ ತೋಟಗಾರಿಕೆ ಅಧಿಕಾರಿಗಳನ್ನು ಒಳಗೊಂಡಂತೆ ತೆಂಗು ಮತ್ತು ಅಡಿಕೆ ಮಂಡಳಿಯನ್ನು ಸ್ಥಾಪನೆ ಮಾಡಬೇಕು. ಹಾಗೂ ಸ್ಥಿರಬೆಲೆಯನ್ನು ಕಾಪಾಡಲು ನೀತಿಯನ್ನು ರೂಪಿಸಬೇಕು. ತೆಂಗು, ಅಡಿಕೆ ಬೆಳೆಗೆ ಕನಿಷ್ಠ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಸಂಘಟನೆಯ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಬಡಗಲಪುರ ನಾಗೇಂದ್ರ, ಕೆ.ಟಿ. ಗಂಗಾಧರ್, ಸುರೇಶ್ ಬಾಬು ಗಜಪತಿ ಇನ್ನಿತರರು ಭಾಗವಹಿ ಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ರಾಮು ಚನ್ನಪಟ್ಟಣ, ಪಿ.ನಾಗರಾಜು ಉಪಸ್ಥಿತರಿದ್ದರು.





