ಮೊಬೈಲ್ ಮೂಲಕ ಜಿಒಎಸ್ ಸಂಪರ್ಕಿಸುವ ವಿನೂತನ ವ್ಯವಸ್ಥೆ
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮೆಸ್ಕಾಂನಿಂದ ಪ್ರಯೋಗ

ಶಿವಮೊಗ್ಗ, ಜೂ.11: ಮಲೆನಾಡು ಭಾಗದಲ್ಲಿ ಗಾಳಿ ಮಳೆಯಿಂದಾಗಿ ಉಂಟಾಗುವ ವಿದ್ಯುತ್ ಕಡಿತ ಬಹುಬೇಗನೆ ಸರಿಪಡಿಸುವಂತಹ ಪ್ರಯತ್ನಕ್ಕೆ ಮೆಸ್ಕಾಂ ಮುಂದಾಗಿದೆ. ಈ ವಿನೂತನ ವಿಧಾನವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಮೆಸ್ಕಾಂ ಅಳವಡಿಸಿಕೊಳ್ಳಲು ಮುಂದಾಗಿದ್ದು, ಇದು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾದುದಾಗಿದೆ. ಶನಿವಾರ ಶಿವಮೊಗ್ಗ ನಗರದ ಗಾಂಧಿ ಉದ್ಯಾನವನದ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ವಿದ್ಯುತ್ ಲೈನ್ ತೊಂದರೆ ಯಾದಾಗ ಜಿಒಎಸ್ (ಗ್ರೂಪ್ ಆಪರೇಟಿಂಗ್ ಸ್ವಿಚ್) ಉಪಕರಣವನ್ನು ಮೊಬೈಲ್ ಕರೆಯ ಮೂಲಕ ಓಪನ್ ಮತ್ತು ಕ್ಲೋಸ್ ಮಾಡಿ ಸರಿಪಡಿಸುವ ವಿನೂತನ ವಿಧಾನವನ್ನು ಪ್ರಾಯೋಗಿಕವಾಗಿ ಅಳವಡಿ ಸಲಾಯಿತು. ಕಾರ್ಯನಿರ್ವಹಣೆ ಹೇಗೆ?
ಪ್ರತಿ ಜಿಒಎಸ್‌ನಲ್ಲಿ ಮೊಬೈಲ್ ಕಂಟ್ರೋಲಿಂಗ್ ಅಳವಡಿಸುವುದರಿಂದ ಎಲ್ಲಿ ತೊಂದರೆಯಾಗಿದೆಯೋ ಆ ಮಾರ್ಗದ ವಿದ್ಯುತ್‌ನ್ನು ಒಂದೇ ಒಂದು ಮೊಬೈಲ್ ಕರೆ ಮಾಡುವ ಮೂಲಕ ವಿದ್ಯುತ್ ಸ್ಥಗಿತಗೊಳಿಸಿ ಇತರ ಭಾಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದಾಗಿದೆ.
ಮಳೆಗಾಲದ ಸಂದಭರ್ದಲ್ಲಿ ಗ್ರಾಮೀಣ ಭಾಗದಲ್ಲಿ ಮರ ಬಿದ್ದು, ಮರದ ಕೊಂಬೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ಸಮಸ್ಯೆ ಉಂಟಾದಾಗ ಮತ್ತೆ ಸಂಪರ್ಕವನ್ನು ಕಲ್ಪಿಸುವಲ್ಲಿ ಇದು ನೆರವಾಗಲಿದೆ. ಲೈನ್ ಎಲ್ಲಿ ತುಂಡಾಗಿದೆ ಎಂಬುದನ್ನು ತಿಳಿಯಲು ಈ ತಂತ್ರಜ್ಞಾನ ಇಲಾಖೆ ಯಲ್ಲಿ ಬಳಕೆಯಾಗಲಿದೆ.







