ಪರಿಸರ, ಯೋಧರು ನಮ್ಮ ಬದುಕಿನ ಅವಿಭಾಜ್ಯ ಅಂಗ : ಸಾಹಿತಿ ಡಾ.ನಾ.ಡಿಸೋಜ
ಯೋಧರಿಗೆ ಸನ್ಮಾನ ಕಾರ್ಯಕ್ರಮ
.jpg)
ಸಾಗರ, ಜೂ. 11: ಪರಿಸರ ಮತ್ತು ಯೋಧರು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ಗಾಳಿ, ಮಳೆ ನೀಡುವ ಮೂಲಕ ಪರಿಸರ ನಮ್ಮನ್ನು ಕಾಪಾಡಿದರೆ, ಶತ್ರುಗಳು ಗಡಿಯೊಳಗೆ ಪ್ರವೇಶ ಮಾಡದಂತೆ ದೇಶದೊಳಗಿರುವ ನಮ್ಮನ್ನು ಯೋಧರು ರಕ್ಷಣೆ ಮಾಡುತ್ತಾರೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದ್ದಾರೆ.
ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಶನಿವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಯುವಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಧರ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಯೋಧರಿಗೆ ಸನ್ಮಾನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಸ್ತೆಯ ಪಕ್ಕದಲ್ಲಿ ಬೆಳೆದು ನಿಂತ ಮರ ಬಿಸಿಲು, ಮಳೆ, ಚಳಿ ಎನ್ನುವುದನ್ನು ನೋಡದೇ ನೂರಾರು ವರ್ಷ ಮನುಷ್ಯನಿಗೆ ನೆರಳು ಹಾಗೂ ಗಾಳಿಯನ್ನು ಕೊಡುತ್ತದೆ. ಇಂತಹ ಮರಗಳನ್ನು ಪವಿತ್ರ ದೃಷ್ಟಿಯಿಂದ ನೋಡುವ ಮನೋಭಾವನೆ ನಮ್ಮಲ್ಲಿನ್ನೂ ಜಾಗೃತಿಯಾಗಿಲ್ಲ. ಮನುಷ್ಯ ಆಧುನಿಕಗೊಂಡಿದ್ದಾನೆಯೇ ವಿನಃ ಅವನಲ್ಲಿನ ಪರಿಸರ ಪ್ರಜ್ಞೆ ಇನ್ನೂ ಬಲಗೊಂಡಿಲ್ಲ ಎಂದರು. ಹಿಂದಿನವರು ಪರಿಸರದ ಜೊತೆ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದರು. ಮನೆಯಲ್ಲಿ ಆಚರಿಸುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲೂ ಪರಿಸರ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಆದರೆ ನಾವು ಹಿರಿಯರ ಮಾರ್ಗದರ್ಶನವನ್ನು ಮರೆತಿದ್ದೇವೆ. ನಮ್ಮದೇ ಆದ ಪ್ರಪಂಚವನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಇದು ಮನುಷ್ಯನನ್ನು ಅಧೋಗತಿಗೆ ಕೊಂಡೊಯ್ಯುತ್ತಿದೆ. ನಮ್ಮ ಬೆಳವಣಿಗೆಗೆ ಕಾರಣವಾಗಿರುವ ಪರಿಸರದ ಬಗ್ಗೆ ನಿಷ್ಕಾಳಜಿ ಸಲ್ಲದು ಎಂದರು. ನಮ್ಮನ್ನು ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ರಕ್ಷಣೆ ಮಾಡುತ್ತಿದ್ದಾರೆ ಎನ್ನುವುದು ಹುರುಳಿಲ್ಲದ ಮಾತು. ನಿಜವಾಗಿಯೂ ನಮ್ಮನ್ನು ರಕ್ಷಣೆ ಮಾಡುತ್ತಿರುವವರು ನಮ್ಮ ಯೋಧರು. ಯುವಸೇನೆ ಯೋಧರ ಹೆಸರಿನಲ್ಲಿ ಗಿಡನೆಟ್ಟು, ರಕ್ಷಿಸುವ ಹೊಣೆಗಾರಿಕೆ ಜೊತೆಗೆ ಯೋಧ ರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಮೂರ್ತಿ ಮಾತನಾಡಿ, ಪರಿಸರ ಉಳಿಸಿ ಬೆಳೆಸಿ ಎನ್ನುವುದು ಕೇವಲ ಘೋಷಣೆಯಾಗದೆ, ಅದನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ನೇತಾಜಿ ಸುಭಾಶ್ಚಂದ್ರ ಬೋಸ್ ಯುವಸೇನೆ ಅಧ್ಯಕ್ಷ ವಸಂತ ಕುಗ್ವೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಚ್.ಶೇಟ್, ಮಂಜಪ್ಪ, ಗಿರೀಶ್, ಸುರೇಶ್ ಮೇಸ್ತ್ರಿ, ಕಸಾಪ ಅಧ್ಯಕ್ಷ ಹಿತಕರ ಜೈನ್ ಉಪಸ್ಥಿತರಿದ್ದರು. ಮೀನಾಕ್ಷಿ ಸ್ವಾಗತಿಸಿದರು. ಸುಭಾಷ್ ಪ್ರಾಸ್ತಾವಿಕ ಮಾತನಾಡಿದರು. ದೇವರಾಜ್ ನಿರೂಪಿಸಿದರು.







